ಮಲೆನಾಡಿನಲ್ಲಿ ಒಂಟಿ ಮನೆಗಳು ಸಾಮಾನ್ಯ. ಅದರಲ್ಲಿ ನಮ್ಮ ಸುಬ್ಬುವಿನ ಮನೆಯು ಒಂದು, ಸುತ್ತ ಸುರಿಯುವ ಕಾಡು. ಹುಲಿಗಳ ಆರ್ಭಟ, ನರಿಗಳ ಊಳು,ಕಣ್ಣಿಗೆ ಕಾಣದಷ್ಟು ವೇಗವಾಗಿ ಓಡುವ ಕಾಡುಕುರಿ, ಆಗಾಗ ಮನೆಯ ಅಂಗಳದಲ್ಲಿ ಕಾಣುವ ಕಾಟಿಗಳ (ಕಾಡೆಮ್ಮೆ) ಹಿಂಡು, ಅಂಗಳದಲ್ಲಿ ಹಾಕಿ ಹೋದ ರಾಶಿ ಸಗಣಿ, ಸಂಜೆಯಾದ ಮೇಲೆ ಕಾಡುವ ದೆವ್ವ ಮತ್ತು ಭೂತಗಳ ಕೂಗು ಇವೆಲ್ಲಾ ಮಲೆನಾಡಿನ ದೈನಿಂದಿನ ದಿನಚರಿ. ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಸಹಾಯದೊಂದಿಗೆ ಕಟ್ಟಿದ ಎರಡು ರೂಮು, ಒಂದು ಹಾಲ್, ಅಡಿಗೆ ಮತ್ತು ದೇವರ ಮನೆಯನ್ನೋಳಗೊಂಡ ಹಂಚಿನ ಮನೆ. ಮನೆಯ ಸುತ್ತಾ ಅಕೇಶಿಯಾ ಗಳಗಳಿಂದ ವಿಸ್ತರಿಸಿಕೊಂಡ ಕಡಿಮಾಡು ( ಮನೆಯ ನಿಜ ಆಯದ ಸುತ್ತಾ ಶೀಟ್ ಅಥಾವ ಹಂಚನ್ನು ಬಳಸಿ ಬಳಕೆಗೆ ವಿಸ್ತರಿಕೊಳ್ಳುವ ಜಾಗ) . ಅಂಗಳದಲ್ಲಿ ಚಪ್ಪರ ಹಾಕಲು ಕೆಲವೊಮ್ಮೆ ಸುಬ್ಬಣ್ಣ ಮೈ ತಿಕ್ಕಲು ಬಳಸುವ ಕಲ್ಲಿನ ಕಂಬಗಳು. ಕೊಟ್ಟಿಗೆಯಲ್ಲಿ ಎರಡೆಮ್ಮೆ, ಒಂದು ಗೊಡ್ಡು(ಬಂಜೆ) ಗೊಬ್ಬರಕ್ಕೆ ಇನ್ನೊಂದು ಹಾಲಿಗೆ. ಒಂದು ಮಲೆನಾಡ ಗಿಡ್ಡ(ಹಸು) ದೇವರ ಅಭೀಷೇಕ ಮತ್ತು ಮನೆಮದ್ದಿನ ಸಲುವಾಗಿ. ಸುಬ್ಬು ಜಾತಿಯಲ್ಲಿ ಬ್ರಾಹ್ಮಣ. ಜೇವನಕ್ಕೆ ತೋಟದಲ್ಲಿ ಕೃಷಿ, ಮನೆಯಲ್ಲಿ ಹೆಂಡತಿ ಗಿರಿಜಾ. ಮದುವೆಯಾಗಿ ೮ ವರ್ಷವಾದರೂ,ಮಕ್ಕಳಿಲ್ಲ.
ನಿನ್ನ ಹುಲಿ ಹಿಡಿಯ, ಹಾಲಿನ ತಂಬಿಗೆಯನ್ನು ಒದ್ದು ಹಾಕಿದ್ದ ಕೆಂಪಿಗೆ ಸುಬ್ಬು ಬಯ್ಯುತಿದ್ದ. ಹಾಲು ಕರೆಯುತ್ತಿದ್ದ ಗಿರಿಜಾ ಮೆಲದ್ದು ಇನ್ನೊಂದು ಸರಿ ಹುಲಿ ಹಿಡಿಯ ಅಂತ ನಿಮ್ಮ ಬಾಯಲ್ಲಿ ಬಂದ್ರೆ ನಮ್ಮ ಹುಟ್ಟೊ ಮಗುವಿನ ಆಣೆ ಎಂದರಚಿದಳು. ಪ್ರತಿವರ್ಷವೂ, ದನವನ್ನೋ ಅಥವಾ ಕರುವನ್ನೋ ಹುಲಿ ಹಿಡಿಯುವುದು ಇದ್ದದ್ದೇ. ಮಕ್ಕಳಿಲ್ಲದ ಗಿರಿಜಾಳಿಗೆ ಮನೆಯ ಜಾನುವಾರುಗಳೇ ಎಲ್ಲಾ. ಅವಳಿಗೆ ಮಗುವಿಲ್ಲದ ಕೊರಗನ್ನು ದನ ಕರುಗಳೊಂದಿಗೆ ಕಳೆದು ಖುಷಿಯಾಗಿರುತ್ತಿದ್ದಳು. ಸಿಟ್ಟಾಗಿದ್ದ ಸುಬ್ಬು ಮಕ್ಕಳಿಲ್ಲದವಳು ಮಗುವಿನ ಮೇಲೆ ಆಣೆ ಹಾಕುತ್ತಾಳೆಂದು ಹತಾಶೆಯಿಂದ ನಕ್ಕು ಕಣ್ಣಿನ ಅಂಚಿನಲ್ಲಿ ಬಂದ ನೀರನ್ನು ಒರೆಸಿ ಮುಂದಿನ ಕೆಲಸಕ್ಕೆ ಹೆಜ್ಜೆ ಕಿತ್ತ. ಮಕ್ಕಳಿಲ್ಲದವಳು ಎಂಬ ಮಾತು ಕೆಲಸದವರು, ನೆರೆಹೊರೆಯವರು, ಸಂಬಂಧಿಗಳಿಂದ ಕೇಳಿ ಗಿರಿಜಾಳನ್ನು ವರುಷಗಳಿಂದ ಕಾಡುತಿತ್ತು. ಪ್ರತಿಯೊಬ್ಬರ ಮಾತುಗಳು ಜಾನುವಾರಿನ ಎದೆ ಬಗೆಯುವ ಹುಲಿಯುಗುರಿನಷ್ಟು ತೀಕ್ಷ್ಣವಾಗಿ ಅವಳ ಮನಸ್ಸನ್ನು ನಿರಂತರ ಚುಚ್ಚುತ್ತಿದ್ದವು.
ಸುಬ್ಬಣ್ಣ ಸಂಜೆ ಸ್ನಾನ ಮುಗಿಸಿ ಕೂದಲಿಗೆ ಕೊಬ್ಬರಿ ಎಣ್ಣೆ ತಿಕ್ಕತ್ತಾ ಗಿರಿಜಾಳನ್ನು ಕರೆದ, ಓಯ್ ಇವಳೇ, ಕಾಪಿ ಕೊಡೆ, ಆಕಡೆಯಿಂದ ಪ್ರತಿಕ್ರಿಯೆಯಿಲ್ಲ. ಅಯ್ಯಾ ಇವ್ಳು ಹುಲಿ ಹಿಡಿಯ. ಮನೆಯಲ್ಲಾ ಹುಡುಕುತ್ತಾ ನಡೆದ, ಅಡುಗೆಮನೆಯಲ್ಲಿ ಅನ್ನಕ್ಕಿಟ್ಟ ನೀರು ಕೊತ ಕೊತ ಕುದಿಯುತ್ತಿತ್ತು. ದೇವರ ನಂದಾದೀಪ ಆರಿಹೋಗುವುದರಲ್ಲಿತ್ತು. ಸುಬ್ಬು ಚಿಂತಿತನಾಗಿದ್ದ. ಆಚೀಚೆ ನೊಡುತ್ತಿದ್ದಾಗ ರೂಮಿನ ಮೂಲೆಯಲ್ಲಿ ಮುಸು ಮುಸು ಅಳುವ ದನಿ ಕೇಳಿತು. ಮಂಚದ ಮೂಲೆಯಲ್ಲಿ ಕತ್ತಲಲ್ಲಿ ಕೂತು ಅಳುತ್ತಿದ್ದಳು. ರೂಮಿನ ಲೈಟ್ ಆನ್ ಮಾಡಿದ ಸುಬ್ಬು, ಮೂರ್ನಾಲ್ಕು ಬಾರಿ ಪುಳು ಪುಳುವಾಗಿ ಲೈಟ್ಉರಿದುಕೊಂಡಿತು. ಸುಬ್ಬು ಗಿರಿಜಾಳ ಬಳಿ ಕುಳಿತು ಕಣ್ಣೋರೆಸಿದ. ಗಿರ್ಜಿಗೆ ಏನಾಯ್ತು, ಏಕಾಗಿ ಈ ದುಃಖವೆಂದು ಕೇಳಿದ. ಇಡೀ ಊರು ನನ್ನ ಬಂಜೆ ಅನ್ನೋದು ಸಾಲ್ದು ಅಂತ ಈಗ ನೀವು ಹೇಳಿ ಎಂದು ಬಿಕ್ಕಿದಳು .ಅವಳ ಕೆನ್ನೆಗಳನ್ನು ಸವರಿ, ಹಣೆಗೊಂದು ಮುತ್ತಿಟ್ಟ ಸುಬ್ಬು ಅಯ್ಯಾ ಇವ್ಳು ಹುಲಿ ಹಿಡಿಯ ಅಷ್ಟಕ್ಕೆ ಯಾರದ್ರು ಅಳ್ತಾರೇನೆ, ಮುಂದಿನಸರಿ ಪೇಟೆಗೆ ಹೋದಾಗ ಡಾಕ್ಟರ್ ಬಳಿ ಹೋಗಿ ಬರೋಣವೆಂದು ಒಪ್ಪಿದ. ಇವರಿಬ್ಬರ ಹಲವು ಕೂಡಿಕೆಯ ನಂತರವೂ ಅವಳು ಬಸುರಾಗದಿದ್ದನ್ನು ಗಮನಿಸಿದ ಗಿರಿಜಾ ಡಾಕ್ಟರ್ ಬಳಿ ತೆರಳಿದರೆ ಏನಾದ್ರು ಪರಿಹಾರ ಸಿಗಬಹುದುದೆಂದು ಹೇಳುತ್ತಿದ್ದ ಮಾತನ್ನೆ ಸುಬ್ಬು ಕಿವಿಗೆ ಹಾಕಿಕೊಳ್ಳುತ್ತಿರಲಿಲ್ಲ. ದೇವ್ರು ಕೊಟ್ರೆ ಆಗುತ್ತೆ ಅಂತ ಹೇಳಿ, ಗಿರಿಜಾಳ ಕೋರಿಕೆಯನ್ನು ಅಲ್ಲಗಳೆಯುತ್ತಿದ್ದ. ಇಬ್ಬರೂ ಮಕ್ಕಳಿಗಾಗಿ ಹೊರದ ಹರೆಕೆಗಳಿಲ್ಲ, ಮಾಡಲು ಉಳಿದ ವ್ರತ, ಪೂಜೆಗಳಿಲ್ಲ. ಇದೆಲ್ಲವನ್ನೂ ನೋಡಿ ಗಿರಿಜಾಳಿಗೆ ದೇವರ ಮೇಲಿರುವ ನಂಬಿಕೆಯೇ ಹೊರಟು ಹೋಗಿತ್ತು. ಗಿರಿಜಾಳಿಗೆ ಮಕ್ಕಳಿಲ್ಲವೆಂಬ ಕೊರಗುಳಿದರೆ, ಸುಬ್ಬುವಿಗೆ ಹುಲಿ ಹಿಡಿಯ ಬಾಯಿ ಪಾಠವಾಗಿ ಹೊಗಿತ್ತು.
ಬೆಳಿಗ್ಗೆ ಕೆಲಸದವರು ಮೆನಗೆ ಬರುವ ಹೊತ್ತು, ಗಿರಿಜಾ ಟಿವಿಯಲ್ಲಿ ಬರುವ ದಿನಭವಿಷ್ಯ ನೊಡುತ್ತಿದ್ದಳು. ಅದರಲ್ಲಿ ಹೇಳಿದ ವ್ರತ ಪೂಜೆಗಳನ್ನು ಮಾಡಿ ದೇವರ ಬಳಿ ಮಕ್ಕಳಿಗಾಗಿ ಕೋರುವುದು. ಇದುವೆ ಅವಳ ದಿನಚರಿ. ಕೆಲಸಕ್ಕೆ ಬಂದ ಸಿಂಗ ಗಿರಿಜಮ್ಮ ಎಂದಿನಂತೆ ದಿನ ದಿನಭವಿಷ್ಯ ನೋಡುವುದನ್ನು ಗಮನಿಸಿ, ನೊಂದುಕೊಂಡು, ಕಾಪಿ ಕುಡಿದು ಕೈಯಲ್ಲಿ ಹೊಗೆಸೊಪ್ಪು ತಿಕ್ಕುತ್ತಾ, ಇದೆಲ್ಲಾ ಪ್ರಯೋಜನ ಇಲ್ಲಮ್ಮಾ ಯಾವ್ದಾದ್ರು ನಾಟಿ ಮದ್ದು ಮಾಡಿದ್ರೆ ಅಗುತ್ತೆ ನೋಡಿಯಂದು ತಿಳಿದದ್ದು ಹೇಳಿದ. ಸಿಂಗ ಅನಕ್ಷರಸ್ಥನಾದರೂ ಪ್ರಪಂಚವನ್ನು ತಿಳಿದವ. ಗಿರಿಜಾ ಕೇಳಿ ಒಂದು ಕ್ಷಣ ಯೋಚಿಸಿ ಸಂಜೆ ಇವರ ಬಳಿ ಹೇಳಬೇಕು ಎಂದುಕೊಂಡು ಟಿವಿ ನಂದಿಸಿ, ಹುಳಿ ಮಾಡಲು ತರಕಾರಿ ಹೆಚ್ಚಲು ಕುಳಿತಳು. ರಾತ್ರಿ ಊಟ ಬಡಿಸುವಾಗ ಸುಬ್ಬುವಿನ ಬಳಿ ವಿಷಯವನ್ನು ಪ್ರಸ್ತಾಪಿಸಿದಳು. ಸುಬ್ಬು ಒಪ್ಪಲಿಲ್ಲ. ಪೇಟೆಗೆ ಡಾಕ್ಟರ್ ಬಳಿ ಹೊಗಲು ಒಪ್ಪಿದೆ ತಾನೆ ನಿನ್ನೆ, ಇದೇನಿದು ಈಗ ಹೊಸ ಹಠವೆಂದು ರೇಗಿ, ನೆಮ್ಮದಿಯಾಗಿ ಊಟ ಮಾಡಲಾದರು ಬಿಡು ಎಂದ. ಗಿರಿಜಾ ಸುಮ್ಮನಾದಳು. ಇಬ್ಬರು ಊಟ ಮಾಡಿ ಮಲಗಿದರು. ಸುಬ್ಬುವಿಗೆ ಗಿರಿಜಾ ಹೇಳಿದ ವಿಷಯವನ್ನು ಯೋಚಿಸುತ್ತಾ ನಿದ್ರೆ ಬರಲಿಲ್ಲ. ಅವಳಿಗೆ ಹಾಗಾದರು ಸಮಾಧಾನ ಸಿಗಬಹುದೆಂದು ಭಾವಿಸಿ, ಹೇಳಲು ಗಿರಿಜೆಯನ್ನು ಕರೆದ. ಗಿರಿಜಾ ನಿದಿರೆಗೆ ಜಾರಿದ್ದಳು.
ಹೀಗೆ ದಿನಗಳು ಸಾಗುತ್ತಿದ್ದವು. ಸಿಂಗ ಊರಿಗೊಬ್ಬ ನಾಟಿವೈದ್ಯ ಪಾದ್ರಿ ಬಂದಿರುವ ವಿಚಾರವನ್ನು ಸುಬ್ಬಣ್ಣನ ಕಿವಿಗೆ ಹಾಕಿದ. ಮರುದಿನ ಇಬ್ಬರೂ ದೇವರಿಗೆ ತುಪ್ಪದ ದೀಪ ಹಚ್ಚಿ ನಾಟಿವೈದ್ಯ ಪಾದ್ರಿ ಇರುವ ಚರ್ಚಿನ ಬಳಿ ಹೋದರು. ಪಾದ್ರಿ ಔಷದವೊಂದನ್ನು ನೀಡಿ ಮುಂದಿನ ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬರಲು ಹೇಳಿದ್ದ. ಗಿರಿಜಾಳ ನೋಡಿದ ದಿನವೇ ಪಾದ್ರಿಗೆ ಮೈಯಲ್ಲಿ ರೋಮವೆಲ್ಲ ನಿಮಿರಿದ್ದವು. ಇವಳನ್ನು ಪಡೆಯಬೇಕು, ಅನುಭವಿಸಬೇಕೆಂಬ ನೀಚ ಯೋಚನೆಯೊಂದು ಕಪಟಿ ಪಾದ್ರಿಯ ತಲೆಯಲ್ಲಿ ಮೊಳಕೆ ಒಡೆದಿತ್ತು. ಗಿರಿಜಾಳು ಅಂದಗಾತೀಯೆ. ಶ್ರಿಗಂಧದ ಮೈಬಣ್ಣ, ಹಾಲಿನಷ್ಟು ಕೋಮಲ ತ್ವಚೆ, ನೀಳ ಕಣ್ಗಳು, ಕಣ್ಗಳಿಗೆ ತೋರಣ ಕಟ್ಟಿದಂತಿರೋ ಹುಬ್ಬುಗಳು, ಮಾರುದ್ದವಿದ್ದ ದಟ್ಟ ಕೂದಲ ಕೇಶರಾಶಿ, ಕೋಲು ಮುಖ, ಮೂಗಿನ ಅಂದವನ್ನು ಇನ್ನಷ್ಟು ಹೆಚ್ಚುಸುತ್ತಿದ್ದ ಮೂಗುತ್ತಿ, ಹತ್ತಿಯಷ್ಟು ಮೃದುವಾದ ಗಲ್ಲಗಳು, ತುಂಬಿದ ಮೈಕಟ್ಟು, ನಡೆಯುತ್ತಿದ್ದರೆ ಹಸಿವನ್ನು ನೀಗಿಸುವಂಥ ಚೆಲುವು. ಒಟ್ಟಾರೆ ಹೇಳೊದಾದರೆ ಬಚ್ಚನಿನ ಎತ್ತರ, ಶ್ರೀದೇವಿಯ ಸೌಂದರ್ಯ. ಇದೆಲ್ಲವನ್ನು ಯೋಚಿಸಿದ ಲಂಪಟ ಪಾದ್ರಿ ತನ್ನ ಸಹಾಯಕರಿಗೆ ರಜೆ ತೆಗೆದುಕೊಳ್ಳಲು ಹೇಳಿ, ಮರುದಿನದ ಭೇಟಿಗಳನ್ನು ರದ್ದುಗೊಳಿಸಿ ಗಿರಿಜೆಗಾಗಿ ಹೊಂಚು ಹಾಕಿ ಹಸಿದ ನರಿಯಂತೆ ಕಾದು ಒಬ್ಬನೇ ಕುಳಿತಿದ್ದ.
ಗಿರಿಜಾ ಬೆಳಿಗ್ಗೆ ಹೊರಟು ಸುಬ್ಬುವಿಗಾಗಿ ಕಾದಳು. ಸುಬ್ಬು ಜರೂರಾದ ಕೆಲಸವೊಂದಿದೆ ಹೋಗಲೆಬೇಕು, ನೀನು ಮಾಣಿಯ ರಿಕ್ಷಾಕ್ಕೆ ಪೋನ್ ಮಾಡಿ ಬರಹೇಳು. ಕೆಲಸ ಕೂಡಲೇ ಮುಗಿಸಿ, ವಾಪಸ್ಸು ಕರೆದುಕೊಂಡು ಬರುತ್ತೇನೆ ಎಂದ. ಒಪ್ಪಿ ಗಿರಿಜಾ ಸೆರೆಗಿನಲ್ಲಿ ನಿರೀಕ್ಷೆಗಳ ಉಡಿಯನ್ನು ತುಂಬಿಕೊಂಡು ರಿಕ್ಷಾದಲ್ಲಿ ಹೊರಟಳು. ರಿಕ್ಷಾದಿಂದ ಇಳಿಯುವಾಗ ಚರ್ಚಿನ ಖಾಲಿ ಆವರಣ ನೋಡಿ ಜನವಿನ್ನು ಬಂದಿಲ್ಲ, ಬಂದ ಕೆಲಸ ಬೇಗ ಮುಗಿಸಬಹುದು ಅಂದುಕೊಂಡು ಪಾದ್ರಿಯ ಕೋಣೆಯ ಕಡೆಗೆ ಹೆಜ್ಜೆ ಹಾಕಿದಳು. ಆದರೂ ಬಣಗುಟ್ಟುತ್ತಿದ್ದ ಜಾಗವನ್ನು ನೋಡಿ ಮನದ ಮೂಲೆಯೊಮ್ಮೆ ಕಂಪಿಸಿತು. ಹನುಮಾನ್ ಚಾಲಿಸ ಮಂತ್ರವನ್ನು ಪಠಿಸುತ್ತಾ ತನಗೆ ಧೈರ್ಯ ಹೇಳಿಕೊಂಡು ಒಳಹೋದಳು. ಅಂದವಾಗಿ ಕಾಟನ್ ಸೀರೆಯುನ್ನುಟ್ಟು ನಡೆದು ಬರುತ್ತಿದ್ದ ಗಿರಿಜೆಯನ್ನು ನೋಡಿ ಪಾದ್ರಿ ಬಾಯಿ ಚಪ್ಪರಿಸಿದ. ಏಸುವಿನ ವಿಗ್ರಹದ ಕೆಳಗೆ ಉರಿಯುತಿದ್ದ ಮೊಂಬತ್ತಿ, ಮಾತನಾಡಿದ ಮರುದ್ವನಿ ಕೇಳುವ ಮುಚ್ಚಿದ ಕೊಠಡಿ. ಮನದ ಮೂಲೆಯಲ್ಲಿದ್ದ ಭಯವೀಗ ಬೆಟ್ಟದಷ್ಟು ಕಾಡಲು ಶುರುವಾಗಿತ್ತು. ಪಾದ್ರಿಯ ಮಾತಿನಂತೆ ಅವನ ಎದುರಿದ್ದ ಸ್ಟೂಲ್ ಮೇಲೆ ಗಿರಿಜಾ ಕುಳಿತಳು. ಬಿಳಿಯ ಗೌನು, ಫ್ರೆಂಚ್ ಗಡ್ಡ, ಡೈ ಹಾಕಿದ ಕೂದಲು, ಕೊರಳಿಗೆ ಮತ್ತು ಕೈಯಲ್ಲೊಂದು ಶಿಲುಬೆಯ ಮಾಲೆ. ಬಾಗಿಲಿನ ಎತ್ತರ, ಅಗಲವಾದ ಎದೆ, ಸಜ್ಜನನಂತೆ ಮುಖವಾಡ ಧರಿಸಿ ಒಳಗೆ ಕ್ಷತ್ರಮ ಉದ್ದೇಶಗಳು, ಇನ್ನೊಂದು ಕೈಯಲ್ಲಿ ಬೈಬಲ್ ಗ್ರಂಥವನ್ನುಇಟ್ಟುಕೊಂಡಿದ್ದ. ಅಲ್ಲೇ ಪಕ್ಕದಲ್ಲಿದ್ದ ಪಾತ್ರೆಯಿಂದ ಗಿರಿಜಾಳ ತೆಲೆಗೆ ನೀರನ್ನು ಪ್ರೋಕ್ಷಿಸಿದ. ಮದ್ದನ್ನು ಕೊಡುವ ನೆಪದಲ್ಲಿ ಕೈ ಸವರಿದ. ತಲೆಮೇಲೆ ಕೈಯಿಡುವ ನಾಟಕವಾಡಿ ಹೆಗಲನ್ನು ಬಳಸಿದ. ಏನು ಮಾಡಬೇಕೆಂದು ತೋಚದ ಗಿರಿಜೆ ಭಯದಿಂದ ಮೇಲೆದ್ದು ಕೂಗಿಕೊಳ್ಳಲು ಮುಂದಾದಳು. ಪಾದ್ರಿ ಕೈಗಳನ್ನು ಬಳಸಿ ಅವಳ ಬಾಯಿಯನ್ನು ಅಮುಕಿ, ಸರೆಗೆಳೆದ. ಸೀರೆ ಪಾದ್ರಿಯ ಕೈಯಲ್ಲುಳಿಯಿತು. ಗಿರಿಜೆ ಕೊಠಡಿಯ ಮೂಲೆಯಲ್ಲಿ ಕುಳಿದಳು. ಹಸಿದ ಹುಲಿ ಜಿಂಕೆಯ ಮೇಲೆ ಎರಗುವ ಮಾದರಿಯಲ್ಲಿ ಎರಗಲು ಮುಂದಾದ, ಗಿರಿಜಾ ಕಿರುಚಿದಳು. ಅದೇ ಸಮಯಕ್ಕೆ ಸರಿಯಾಗಿ ಚರ್ಚಿನ ಗಂಟೆ ಬಾರಿಸಿತು. ಬಾಗಿಲು ತೆರೆದು ಕಳ್ಳ ಬೆಕ್ಕಿನಂತೆ ನಡೆದ ಕಾಮುಕ ಪಾದ್ರಿ. ಸೀರೆ ಸುತ್ತಿಕೊಂಡು ಗಿರಿಜಾ ಓಡಿದಳು. ಸುಬ್ಬು ಬಂದಿರಲಿಲ್ಲ. ಅಂದು ಗಿರಿಜೆಯ ಮಾನ ಏಸು ಕಾಪಾಡದಿದ್ದರೂ, ಚರ್ಚನ್ನು ಸ್ವಚ್ಛಗೊಳಿಸುವಾಕೆ ಕಾಪಡಿದ್ದಳು.
ಮರ್ಯಾದೆಗೆ ಅಂಜಿ ಮನೆಗೆ ಬಂದ ಗಿರಿಜಾ ಚರ್ಚಿನಲ್ಲಿ ನಡೆದ ಘಟನೆಯನ್ನು ಯಾರಲ್ಲೂ ಹೇಳಲಿಲ್ಲ. ಮಕ್ಕಳಿಲ್ಲವೆಂಬ ಕೊರಗನ್ನು ನುಂಗಿ ಕೊಂಡಂತೆ ಬೆಳಿಗ್ಗೆ ನಡೆದದ್ದನ್ನು ತನ್ನೋಳಗೆ ಹೂತಾಕಿದ್ದಳು. ದಿನವಿಡಿ ಮೌನವಾಗಿದ್ದಳು, ಗರಬಡಿದವರಂತೆ, ಸುಬ್ಬು ಕೇಳಿ ಕಾಳಜಿ ತೋರಿದರು ಗಿರಿಜೆ ಬಾಯಿ ಬಿಡಲಿಲ್ಲ. ರಾತ್ರಿ ನಿದ್ರೆಯಲ್ಲಿ ಬೆಚ್ಚಿಬೀಳುತ್ತಿದ್ದಳು. ಸುಬ್ಬು ಸಂತೈಸಲು ಅವಳನ್ನು ತಬ್ಬಿದ. ಗಿರಿಜಾಳ ಭಯ ಸುಬ್ಬುವಿನ ಪ್ರಣಯಕ್ಕೆ ಸೋತಿತ್ತು. ಇಬ್ಬರು ರಾತ್ರಿ ಕೂಡಿದ್ದರು. ಭಯದ ಅಮಲಿಗೋ, ಊರಿನವರ ಕನಿಕರವೋ, ದೇವರ ಕೃಪೆಯೋ, ತಿಂಗಳುಗಳಲ್ಲಿ ಗಿರಿಜಾ ಸಿಹಿ ಸುದ್ದಿ ನೀಡಿದ್ದಳು. ಇಬ್ಬರ ಸುಖ, ಸಂತೋಷಗಳು ಮೆನಯಲ್ಲಿ ಕಳೆ ಕಟ್ಟಿತ್ತು. ಸುಬ್ಬು ಖುಷಿಯಲ್ಲಿ ನಿನ್ನ ಹುಲಿ ಹಿಡಿಯ ಎಂದು ಗಿರಿಜೆಯನ್ನು ದೇವರನ್ನು ಹೋರುವ ರಥದಂತೆ ಹೊತ್ತು ಊರಿಗೆಲ್ಲ ಸುದ್ದಿ ಮುಟ್ಟಿಸಿದ್ದ, ಸೀಮಂತವನ್ನು ಸೀಮೆಗೆಲ್ಲ ಹೇಳಿ ಭರ್ಜರಿಯಾಗಿ ನೆರೆವೆರಿಸಿದ. ಕೆಲವೇ ದಿನಗಳಲ್ಲಿ ಗಿರಿಜಾ ಅವಳಿ ಗಂಡು ಮಕ್ಕಳನ್ನು ಹೆತ್ತಳು. ಸುಬ್ಬುವಿನ ಸಂತೋಷ ಹೇಳತೀರದು, ಹಿಗ್ಗಿ ಹಿಗ್ಗಿ ಹಾರಿದ್ದ. ಇದೆ ಹುರುಪಿನಲ್ಲಿ ಅವಳಿಗಳ ನಾಮಕರಣವನ್ನು ಮುಗಿಸಿದ.
ವಸಂತಗಳು ಕಳೆದವು, ಮಕ್ಕಳು ದೊಡ್ಡವಾದವು. ಮನೆಯ ಹೊಸಿಲು ದಾಟಿ ಜಗಲಿ ಬಳಸಿ ಅಂಗಳಕ್ಕೆ ಮಣ್ಣಾಟಕ್ಕೆ ಅಂಬೆ ಹರಿಯಲು ಶುರು ಮಾಡಿದ್ದವು. ಮುಸ್ಸಂಜೆಯ ಸಮಯ. ಸುಬ್ಬು ಮತ್ತು ಜೊತೆಯ ಕೆಲಸದವರು ಗದ್ದೆ ಹೊರೆ (ಕುಯ್ದ ಭತ್ತದ ಪೈರನ್ನು ಹೊತ್ತು ಮನೆಯ ಕಣಕ್ಕೆ(ಭತ್ತ, ಪೈರನ್ನು ಬೇರೆ ಮಾಡುವ ಜಾಗ) ತರುವ ಪ್ರಕ್ರಿಯೆ) ಹುಲಿಯೋ ಹುಲಿ (ಕೊನೆಯ ಹೊರೆಗಳನ್ನು ಹೊತ್ತು ತರುವಾಗ ಹೇಳುವ ಮಲೆನಾಡಿನ ಸಂಪ್ರದಾಯ) ಎಂದು ಎಲ್ಲರೂ ಕೂಗುತ್ತಾ ಕಣದ ಕಡೆಗೆ ಹೊರಟಿದ್ದರು. ದನದ ಕರುವಿಗಾಗಿ ಕಣದ ಮೂಲೆಯಲ್ಲಿ ಹೊಂಚು ಹಾಕಿ ಕುಳಿತಿತ್ತು ಹುಲಿ. ಕಣದ ಪಕ್ಕವೇ ಕೊಟ್ಟಿಗೆ. ಅಲ್ಲೇ ಹಾಲು ಕರೆಯುತ್ತಿದ್ದ ಗಿರಿಜಾಳನ್ನು ಹುಲಿ ಗಮನಿಸಿತ್ತು. ಹುಲಿಯ ದೃಷ್ಠಿ ಅಂಗಳದಲ್ಲಿ ಆಟವಾಡುತ್ತಿದ್ದ ಮಕ್ಕಳೆಡೆಗೆ ಹೊರಳಿತು.. ಚಂಗನೇ ಎಗರಿ ಮಗುವೊಂದನ್ನು ಕಚ್ಚಿ ಪೊದೆಯಲ್ಲಿ ಮರೆಯಾಯಿತು. ಕೊಟ್ಟಿಗೆಯಲ್ಲಿ ಹುಲಿಯನ್ನು ನೋಡಿದ ಕೆಂಪಿ ಕುಮುಟಿತ್ತು(ಹೆದರುವುದು). ಗಿರಿಜೆ ಹಾಲಿನ ಪಾತ್ರೆ ಅಲ್ಲೆ ಬಿಟ್ಟು ಇನ್ನೊಂದು ಮಗುವನ್ನು ಎತ್ತಿಕೊಳ್ಳಲು ಓಡಿದಳು. ಅಷ್ಟರಲ್ಲೇ ಸುಬ್ಬುವು ಕಣದಿಂದ ಮನೆಗೆ ಧಾವಿಸಿದ. ಗಿರಿಜಾ ಮಗುವನ್ನು ಎತ್ತಿಕೊಂಡು ಮೆನಯ ದಾರಂದಕ್ಕೆ ಕಂಗೆಟ್ಟು ಕುಸಿದು ಕೂತಳು, ಸುಬ್ಬು ಚಪ್ಪರದ ಕಂಬಕ್ಕೆ ಒರಗಿ ಅಯ್ಯೋ ನಿನ್ನ ಹುಲಿ ಹಿಡಿಯ... ಅಳುತ್ತಾ ಕುಸಿದ. ಜೊತೆಯಿದ್ದವರು ಹುಲಿಯನ್ನು ಹುಡುಕಿ ಹೊಡೆಯಲು ನಾಡಕೋವಿ, ಕತ್ತಿ, ಕೆತ್ತಿಟ್ಟ ಹಾರೆಯ (ಮಣ್ಣನ್ನು ತೆಗೆಯಲು ಬಳಸುವ ಕಬ್ಬಿಣದ ಸಾಧನ ಕಾವು(ಮರದ ಉದ್ದನೆಯ ಹಿಡಿ) ಹಿಡಿದು ಹೊರಟರು. ಸುಬ್ಬುವಿಗೆ ವಿಪರೀತ ಗಾಬರಿಯಾಗಿ ಎಚ್ಚರವಾಯಿತು, ಈಗತಾನೇ ತುಂಬಿದ್ದ ಸಂಸಾರಕ್ಕೆ ಬರಸಿಡಿಲು ಬಡಿದ ಭಾವನೆ. ಗಿರಿಜಾಳೂ ಎದ್ದಳು, ಸುಬ್ಬು ಕಂಡ ದುಸ್ವಪ್ನವನ್ನು ವಿವರಿಸಿದ. ಗಿರಿಜಾ ಸಮಯ ನೋಡಿದಳು, ಬೆಳಿಗಿನ ಜಾವ ಸರಿದಿತ್ತು. ಗಿರಿಜಾ ಸುಬ್ಬುವಿನ ಮುಖ ನೋಡಿದಳು. ಸುಬ್ಬು ಅಂದಿನಿಂದ ಹುಲಿ ಹಿಡಿಯ.. ಹೇಳೊದಿಲ್ಲವೆಂದು ಹೆಂಡತಿಯ ಬಳಿ ಪ್ರಮಾಣ ಮಾಡಿದ. ಅದೆ ಸಮಯಕ್ಕೆ ಸರಿಯಾಗಿ ಬೆಳಗಿನ ಅಲರಾಂ ಕಿರ್ರನೆ ಬಡಿದುಕೊಂಡಿತು.