ದಾರಿ ತಪ್ಪಿದ ದಾಸಿ

ಸ್ವಭಾವತಃ ಬಲುಪಾಪ. ಹಣೆಯೊಲ್ಲೊಂದು ಬಿಳಿನಾಮ.ಆದ್ರಿಂದ ಅವ್ಳಿಗೆ ದಾಸಿ ಎಂಬಾ ನಾಮಕರಣವಾಯಿತು. ಉಳಿದ ಕಡೆಯಲ್ಲ ಬರೆ ಶ್ಯಾಮಲ. ನೋಡಲೂ ದಷ್ಟಪುಷ್ಟವಾಗಿದ್ದು ಊರಿನಲ್ಲಿ ಯಾರೆ ನೋಡಿದರು ಭಟ್ಟರ ಮನೆಯ ಹಸುವೆಂದು ನೋಡಿದ ಕೂಡಲೇ ಹೇಳಬಹುದಾದ ಚಲಪತಿ ಭಟ್ಟರ ಮತ್ತು ಮಾಲತಿ ದಂಪತಿಗಳ ಸಾಕಾಣಿಕೆ. ಮನೆಯಲ್ಲೇ ಹುಟ್ಟಿ ಬೆಳೆದು ದೊಡ್ಡದಾದ ಬುಡ. ಕೊಡಿಲ್ಲ ಬೋಳಿ. ರಸ್ತೆ ಬದಿಯಲ್ಲಿ, ಕಾಡಿನಲ್ಲಿ, ಗದ್ದೆ,ಕೆರೆಗಳ ಬದಿ ಯಾರೇ ಕರೆದರೂ ನಿಂತು ಮೈ ತುರಿಸಿಕೊಂಡು ಹೋಗುವಷ್ಟು ಸಾಧು. ಪ್ರತಿ ಷಷ್ಠಿಯ ದಿನ ಊರ ಆಶ್ವತ್ಥ ಮರದ ಬಳಿಯಲ್ಲಿರುವ ನಾಗರ ಕಲ್ಲಿನ ಪೂಜೆಯ ನೈವಿಧ್ಯದ ಬಾಳೆಹಣ್ಣು, ನೆನಸಿದ ಅಕ್ಕಿ, ಬೇಳೆ ತಿನ್ನಲ್ಲೂ ತಪ್ಪದ ಹಾಜರಿ. ಒಂದು ವೇಳೆ ಪ್ರಸಾದ ಕೊಡಲಿಲ್ಲವೆಂದಲ್ಲಿ ನಾಗರ ಕಟ್ಟೆಗೆ ಎರಡು ಕಾಲು ಕೊಟ್ಟು ನಿಂತು, ನನ್ನ ಪಾಲಿನ ಪ್ರಸಾದ ಎಂದು ಪುರೋಹಿತರಿಗೆ ವರಾತಬಿದ್ದು ಗಿಟ್ಟಿಸಿಕೊಳ್ಳುವ ಸಲಿಗೆ. ಮಲೆನಾಡು ಗಿಡ್ಡ, ಕೊಟ್ಟಿಗೆಗೆಲ್ಲ ಮುದ್ದು. ದಿನಕ್ಕೆ ಒಂದು ಕಟ್ಟಾಗುವಷ್ಟಾದರು ಹಸಿಹುಲ್ಲು ಬಾಯಿಬುಡದ ವಡ್ಡಿಗೆ (ತಿಂಡಿ ಮತ್ತು ಹುಲ್ಲನ್ನು ಹಾಕುವ ಕೊಟ್ಟಿಗೆಯ ಎದುರಿನ ಜಾಗ) ಬೀಳಬೇಕು ಇಲ್ಲವೆಂದರೆ ಇಡಿದಿನ ನಿರಹಾರ. ಭಟ್ಟರು ಬೇಕಾದರೆ ಒಂದೊತ್ತು ಊಟ ಬಿಟ್ಟಾರು, ಆದರೆ ದನಗಳನ್ನು ಉಪವಾಸ ಕಟ್ಟಿದ್ದಿಲ್ಲ. ಪೇಟೆ ಮನೆಗಳಲ್ಲಿ ನಾಯಿ ಅಥವಾ ಬೆಕ್ಕು ಸಾಕಿದ್ಹಾಗೆ, ಭಟ್ಟರಿಗೆ ಜಾನುವಾರೆಂದರೆ ಬಹಳ ಮಮತೆ. ಬೇಕಾದ ಹಾಗೆ ಹೊಟ್ಟೆಗೆ ಹಾಕಲು ಚಲಪತಿ ಭಟ್ಟರು ಜಮಿನ್ದಾರಾರೆನಲ್ಲ. ಚಂಪಾಪತಿ ಭಟ್ಟರ ಅವಿಭಕ್ತ ಕುಟುಂಬ ಪಾಲದಾಗ ಸಿಕ್ಕ ಅರ್ದ ಎಕರೆ ಅಡಕೆ, ಕಾಪಿ, ಕಾಳುಮೆಣಸು ಬೆಳೆಯುವ ರಿಕಾರ್ಡಿನ ಹಿಡುವಳಿ. ಇನ್ನರ್ದ ಎಕರೆ ಒತ್ತುವರಿ ಜಾಗ. ಅದರಲ್ಲಿ ಪ್ರಮುಖ ಬೆಳೆಯಾದ ಅಡಿಕೆಗೆ ಹಳದಿಯಲೆ, ತುಂಡೆ ರೋಗ. ಮುರ್ನಾಲ್ಕು ಕ್ವಿಂಟಾಲ್ನಷ್ಟು ಆಗುತ್ತಿದ್ದ ಫಸಲು ಈಗ ಒಂದು ಕ್ವಿಂಟಾಲ್ನವೊಳಗೆ ಬಂದು ನಿಂತಿದೆ.   

ಚಲಪತಿ ಭಟ್ಟರ ಮನೆಯಲ್ಲಿ ಜಾನುವಾರುಗಳನ್ನು ಕಟ್ಟಿಸಾಕಿ ಅಭ್ಯಾಸವಿಲ್ಲ. ಬೆಳ್ಳಿಗೆ ಗೊಬರ್ ಗ್ಯಾಸ್ಗೆ ಸಗಣಿ ಹೆಕ್ಕಿ ,ಕಲಸಿ, ಹಿಂಡಿಯಿಟ್ಟು ಹಾಲು ಕರೆಸಿದ ಕೂಡಲೇ ಕಣ್ಣಿ(ಸರಪಣಿ) ಕಳಚಿ ಹೊರಗೆ ಬಿಟ್ಟರೆ ಮತ್ತೆ ಅವನ್ನು ಮೇಯಿಸಲು ಯಾರಬ್ಬೊರ ಕಾಳಜಿಯ ಮೇಲ್ವಿಚಾರಣೆಯ ಅಗತ್ಯವಿಲ್ಲ. ದಾಸಿ ಭಾನು, ಭಾವನಿ, ಕೆಂಪಿ ನಾಲ್ಕು ಒಟ್ಟಾಗಿ ಮೆಂದು, ತಿರುಗಾಡಿ ಸಂಜೆಯ ಸಮಯಕ್ಕೆ ಹಿಂದಿರುಗುವುದು ರೂಢಿ. ಸಂಜೆ ಕೊಟ್ಟಿಗೆ ಬಂದೊಡನೆ ಹೊಟ್ಟೆಗೆ ಹಾಕಿ ಹಾಲು ಕರೆಸುವುದು, ಇದಿಷ್ಟು ಇವುಗಳ ದಿನಚರಿ. ಆದರೆ ದಾಸಿ ಇದಕ್ಕೆ ಅಪವಾದ.

ದಾಸಿಗೆ ಪ್ರತಿದಿನವೂ ಮನೆಗೆ ಬರುವುದಕ್ಕೆ ಆಲಸ್ಯ, ಒಂದು ವೇಳೆ ಸಂಜೆ ಬರದಿದ್ದಲ್ಲಿ ಗುಡ್ಡದ ಮೇಲೆ ಉಡಿಯಲ್ಲೋ ಅಥವಾ ನೆರೆಮನೆಯವರ ಗೊಬ್ಬರಗುಂಡಿಯಲ್ಲಿ ಇರುಳು ಕಳೆಯುತ್ತಿತ್ತು. ನಾಳೆ ಮತ್ತೆ ಶಾಲೆಗೆ ಹೋಗಬೇಕಲ್ಲವೆಂಬ ಬಾಲವಾಡಿ ಮಕ್ಕಳ ತರ್ಕ. ಹಲವು ಬಾರಿ ಎರಡು ಮೂರು ದಿನಗಳಿಗೊಮ್ಮೆ ಮನೆಗೆ ಬಂದ ಪ್ರಸಂಗಗಳಿವೆ. ದಾಸಿ ಬರಲಿಲ್ಲವೆಂದು ಭಟ್ಟರು ಜಾಸ್ತಿ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಪ್ರಾಯದಲಿನ್ನು ಮಣ್ಕ (ಒಂದರಿಂದ ಎರಡುವರೆ ವರ್ಷದೊಳಗಿನ ಕರು) ಇಂದಲ್ಲವೇ ನಾಳೆ ಬರುತ್ತದೆ ಎನ್ನುವ ವಿಶ್ವಾಸ. ಆದರೆ ಇತ್ತೀಚಿಗೆ ಮೈತುಂಬಿರುವ ರಾಸುಗಳನ್ನು ಪುಂಡ ತುರ್ಕರ ಪಡೆ ಅಪಹರಿಸಿದ ನಿದರ್ಶನಗಳನ್ನು ಚಲಪತಿ ಭಟ್ಟರು ದಿನಪತ್ರಿಕೆಯಲ್ಲೂ ಓದಿ ಮತ್ತು ಊರವರ ನಾಲಿಗೆಗಳಿಂದ ಕೇಳಿ ಗೊತ್ತು. ಕೆಲ ದುರುಳರಿಗೆ ಕಣ್ಗತ್ತಲೆ ಕಟ್ಟಿದ ಕೂಡಲೇ ನಿರ್ಜನ ಪ್ರದೇಶದಲ್ಲಿದ ದನಕರುಗಳ ಅಪಹರಣ ಮಾಡುವುದೇ ಉದ್ಯೋಗ. ಇದೊಂದು ಅಳುಕು ಭಟ್ಟರಿಗೆ ಆಗಾಗ ಕಾಡುತಿತ್ತು.

 

ದಾಸಿಯೀಗ ಒಂಭತ್ತು ತಿಂಗಳ ಗಬ್ಬ(ಗರ್ಭಿಣಿ). ಗುಡ್ದದ ಮೇಲೋ ಅಥವಾ ರಸ್ತೆಬದಿಯಲ್ಲಿ ಕರುಹಾಕಿ, ದುಷ್ಕರ್ಮಿಗಳು ತುಂಬಿಕೊಂಡು ಹೋದರೆ, ಒಂದೆಡೆ ಹದಿನೈದರಿಂದ ಇಪ್ಪತ್ತು ಸಾವಿರದ ಸ್ವತ್ತು ಹೋಯಿತು ಹಾಗೆ ಮನಸ್ಸಿನ ನೆಮ್ಮದಿ ಕೂಡ. ಹಾಗಾಗೆ ಭಟ್ಟರಿಗೆ ಮುಂಚಿನಂತೆ ಆಕಳು ಮನೆಗೆ ಬರದಿದ್ದರೆ ಕಾಯಲು ಅಂಜಿಕೆ. ಇಂತಹ ಸನ್ನಿವೇಶದಲ್ಲಿ, ದಿನ ಬೆಳಿಗ್ಗೆ ಮೇಯಲು ಮಾಲತಿಯನ್ನೂ ಕೇಳಿ, ಪೃಷ್ಠ ಭಾಗವನೊಮ್ಮೆ ಪರೀಕ್ಷಿಸಿ ಬಿಡುತ್ತಿದ್ದರು. ಹೀಗಿರುವಾಗ ಅಂದು ಬಿಟ್ಟ ದಾಸಿ ಹಿಂದುರುಗಲಿಲ್ಲ. ಅದರ ಸ್ವಭಾವ ತಿಳಿದಿದ್ದರಿಂದ ಆ ದಿನ ನಾಳೆ ಬರಬಹುದೆಂಬ ನಂಬಿಕೆಯ ಮೇಲೆ ಸುಮ್ಮನಿದ್ದರು. ಆ ರಾತ್ರಿ ಚಲಪತಿ ಭಟ್ಟರಿಗೆ ನಿದ್ರೆ ಕೂಡ ಕಣ್ಣಿಗೆ ಹತ್ತಲಿಲ್ಲ. ಯಾವುದೋ ದಟ್ಟಡಿವಿಯಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿ ಬಿಟ್ಟಂತೆ. ದಾಸಿಯದೆ ಕುರಿತು ಯೋಚನೆ. ಮರುದಿನ ಬೆಳಕರಿಯುತ್ತಿದ್ದಂತೆ ಭಟ್ಟರು ಕೊಟ್ಟಿಗೆ ಕೆಲಸವನ್ನು ಮಾಲತಿಯಲ್ಲಿ ಮಾಡಲು ತಿಳಿಸಿ, ದಾಸಿಯನ್ನು ಹುಡುಕಲು ಕಾಲಿಗೆ ಚಕ್ರ ಕಟ್ಟಿದವರ ವೇಗದಲ್ಲಿ ಮನೆಯಿಂದ ಹೊರಟರು. ರಸ್ತೆಬದಿ, ಕೆರೆಬದಿ, ಪಕ್ಕದ ಸುಂಕಪ್ಪ ಗೌಡರ ಮನೆಯ ಗೊಬ್ಬರಗುಂಡಿ ಹೀಗೆ ದಾಸಿ ದಿನ ಹೋಗುತ್ತಿದ ಜಾಗಗಳನ್ನು ಹುಡುಕಿದರು. ಎಲ್ಲೂ ಕಾಣಿಸಲಿಲ್ಲ. ಬೆಳಿಗ್ಗೆ ಗಂಜಿ ಊಟದ ಸಮಯಕ್ಕೆ ಹಿಂದಿರುಗಿದರು. ಪುನಹ ಸಂಜೆ ಹುಡುಕಲು ಹೊರಟರು. ದಾಸಿಯ ಸುಳಿವಿಲ್ಲ.

ಬೆಳಿಗ್ಗೆ ಸಂಜೆ ಬೆಳಿಗ್ಗೆ ಸಂಜೆ ಹೀಗೆ ಭಟ್ಟರು ಹುಡುಕುವುದನ್ನೂ ಬಿಟ್ಟಿರಲಿಲ್ಲ. ನೆರೆಮನೆಗಳಿಗೆ ಫೋನು ಹಾಯಿಸಿ, ಹೋಗಿ ಕೇಳಿದ್ದಾಯಿತು ಆದರೂ ದಾಸಿಯ ಸುಳಿವಿಲ್ಲ. ಇಲ್ಲಿಗೆ ದಾಸಿ ಕಾಣೆಯಾಗಿ ನಾಲ್ಕನೇ ದಿನ. ಕರುವಾಕಿದ ಹಸುವನ್ನು ಯಾರೋ ದುಷ್ಕರ್ಮಿಗಳು ಹೊತೊಯ್ದರೆಂದೆಲ್ಲ ಯೋಚಿಸಿ, ಮುಂಡೆ ಮಕ್ಕಳ ವಂಶಕೆಲ್ಲ ಹಿಡಿಶಾಪ ಹಾಕಿದರು. ಮತ್ತೆ ಛಲ ಬಿಡದ ಭಟ್ಟರು ನಾಲ್ಕನೇ ದಿನ ಸಂಜೆ ಹುಡುಕಲು ಹೊರಟರು. ಮನೆ ಮೇಲಿನ ಗುಡ್ಡದ ದೂಪದ ಮರದ ಕೆಳಗಿನ ಚಿಕ್ಕ ಉಡಿಯ ಬಳಿ ಹುಂಕಾರ ಕೇಳಿದ ಹಾಗಾಯಿತು. ನಾಲ್ಕು ದಿನ ಮುಖ ಸಪ್ಪೆಹಾಕಿಕೊಂಡ ಭಟ್ಟರ ಮುಖದಲ್ಲಿ ನಗು ಹರಿದಿತ್ತು. ಕಗ್ಗತ್ತಲೆಯ ದಾರಿಯಲ್ಲಿ ಮಿಣುಕು ಹುಳ ಸಿಕ್ಕಹಾಗೆ. ದಾಸಿ ಅಲ್ಲಿದ್ದಳು. ಭಟ್ಟರನ್ನು ನೋಡಿದ ಕೂಡಲೇ ಓಡಿಯು ಬಂದಳು. ಕುತ್ತಿಗೆಗೊಂದು ಹಗ್ಗ ಹಾಕಿ ಮನೆಗೆ ಹೊಡ್ಕೊಂಡು ಬಂದರು, ಮಾಲತಿಯಮ್ಮ ಕೂಡ ಕೊಟ್ಟಿಗೆ ಓಣಿಯ ಬದಿ ನಿಂತು ಕಾಯುತ್ತಿದ್ದರು. ಒಮ್ಮೆ ಮೈಸವರಿ, ಹಸಿಹುಲ್ಲನ್ನು ಹಾಕಿ ಕಟ್ಟಿದರು. ಭಟ್ಟರು ಉಸ್ಸಪ್ಪಾ ಸಾಕಾಯ್ತು ಎಂಬಂತೆ ಉಸಿರು ಬಿಟ್ಟು ವೊಡ್ಡಿಯ ಮೇಲೆ ಕುಳಿತರು. ಬೆಟ್ಟದ ಭಾರ ತಲೆಮೇಲಿನಿಂದ ಇಳಿಸಿದಷ್ಟು ಸಮಾಧಾನವಾಯಿತು.

ಅದೇ ಸಮಯಕ್ಕೆ ಸರಿಯಾಗಿ ಭಟ್ಟರ ತಮ್ಮೆನ್ದರಾದ ಗಜಪತಿ, ಲಕ್ಷ್ಮೀಪತಿ, ವೆಂಕಟೇಶ ಮತ್ತುಅವರ ಸಂಸಾರ ,ದಾಸಿಯನ್ನು ನೋಡಲು ಕೆಳಗಿನ ಮನೆಗೆ ಬಂದರು.

ಚಂಪಾಪತಿ ಭಟ್ಟರದ್ದು ಕೂಡು ಕುಟುಂಬ. ಬರೋಬ್ಬರಿ 17 ಜನರಿದ್ದ ಮನೆ. ಆದರೆ ಕೆಲವು ವರ್ಷಗಳ ಹಿಂದೆ ವೈಮನಸ್ಸುಗಳಿಂದ ಬೇರೆ ಬೇರೆಯಾಗಿ ಗಜಪತಿ, ಲಕ್ಷ್ಮೀಪತಿ, ಚಲಪತಿ ಮತ್ತು ವೆಂಕಟೇಶನಿಗೆ ಇರುವ ಕೃಷಿ ಭೂಮಿ ಮತ್ತು ಸೊಪ್ಪಿನ ಹಾಡ್ಯವನ್ನು ಸಮಪಾಲು ಮಾಡಿದ್ದರು. ಚಲಪತಿ ಭಟ್ಟರ ಮನೆಯ ಮೇಲ್ಭಾಗದ ದರ್ಕಸ್ತಿನಲ್ಲಿ ಗಜಪತಿ, ಲಕ್ಷ್ಮೀಪತಿ ಮನೆಕಟ್ಟಿ ವಾಸಿಸುತ್ತಿದ್ದರು. ಕೊಟ್ಟಿಗೆಗೆ ಬಂದ ಗಜಪತಿ, ದನ ಕರುಹಾಕಿದ ಹಾಗೆ ಕಾಣ್ತಿದೆ ಎನ್ನುವ ಸಂಶಯ ವ್ಯಕ್ತ ಪಡಿಸಿದ. ಆಗಾ ತಾನೆ ಉಸಿರುಬಿಟ್ಟು ಕುಳಿತಿದ್ದ ಚಲಪತಿ ಭಟ್ಟರಿಗೆ ಮತ್ತೋಮ್ಮೆ ಗೊಂದಲವಾಯಿತು. ಗುಡ್ಡದಮೇಲೆ ಸಿಕ್ಕಿದು ದಾಸಿ ಮಾತ್ರವೇ ಹೊರತು ಸುತ್ತಮುತ್ತ ಕರುವೆಲ್ಲೂ ಇರಲಿಲ್ಲ. ಹೀಗೆ ಒಬ್ಬಬರದ್ದು ಒಂದೊಂದು ಅಭಿಪ್ರಾಯ. ಒಬ್ಬರು ಕರುವಾಕಿದೆ ಅಂದರೆ ಇನ್ನೊಬ್ಬರದು ಗ್ಯಾರೆಂಟಿ ಇಲ್ಲ. ಒಂದು ವೇಳೆ ಕರು ಹಾಕಿದ್ದಲ್ಲಿ ತಾಯಿ ಕರುವನ್ನು ಬಿಟ್ಟುಬರಲು ಸಾಧ್ಯವಿಲ್ಲ ಎಂಬ ವಾದವನ್ನು ಕೆಲವರು ಮಂಡಿಸಿದರು. ಆದರೆ ವೆಂಕಟೇಶ ದಾಸಿ ಚೊಚ್ಚಲ ಮಣ್ಕ (ಮೊದಲ ಕರು) ಕರುವನ್ನು ಬಿಟ್ಟುಬಂದಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲವೆಂದ. ನಡೆದ ಗೋಜಲುಗಳನ್ನೆಲ್ಲ ಗಮನಿಸಿ ಚಲಪತಿ ಭಟ್ಟರು ಒಂದು ನಿರ್ಧಾರಕ್ಕೆ ಬಂದಂತೆ ಡಾಕ್ಟರನ್ನು ಕರೆಸಿ ಕೇಳೋದೇ ಉತ್ತಮವೆಂದು ನಿರ್ಧರಿಸಿದರು. ಫೋನು ಮಾಡಿ ಕರೆದಾಯಿತು, ಡಾಕ್ಟರು ಬಂದರು, ಪರೀಕ್ಷಿಸಿದರು. ಕರುವಿನ್ನು ಗರ್ಭದಲ್ಲಿದೆಯಂದು ಧೈರ್ಯ ತುಂಬಿ ಜೇಬಿಗೆ ಇನ್ನೂರು ರೂ ಇಳಿಸಿ ಹೋದರು.

ರಾತ್ರಿ ಮಲಗುವಾಗ ಮಾಲತಿ ಮತ್ತು ಚಲಪತಿ ಭಟ್ಟರು ಇನ್ನು ಕರುಹಾಕುವವರೆಗೆ ದನವನ್ನು ಮೇಯಲು ಬಿಡುವುದಿಲ್ಲವೆಂದು ನಿರ್ಧರಿಸಿ ಕಣ್ಮುಚ್ಚಿದರು. ಅಂದು ಭಟ್ಟರಿಗೆ ಸಸೂತ್ರವಾಗಿ ಕಣ್ಣಿಗೆ ನಿದ್ದೆ ಹತ್ತಿತ್ತು. ತಾಯಿಯ ಎದೆ ಹಾಲು ಕುಡಿದು ಮಲಗಿದ ಮಗುವಿನ್ಹಾಗೆ. ಹೀಗೆ ಮೂರ್ನಾಲ್ಕು ದಿನ ದಾಸಿಯನ್ನು ಕೊಟ್ಟಿಗೆಯಿಂದ ಹೊರ ಬಿಡಲಿಲ್ಲ. ಆದರೆ ದನ ಕರುವಾಕುವ ಯಾವುದೇ ಸೂಚನೆಗಳನ್ನು ತೋರಲಿಲ್ಲ.

ಹೀಗಿರುವಾಗ ದಾಸಿ ಸಿಕ್ಕಿ ಎರಡನೇ ದಿನ ಊರಿನ ಮಲ್ಲಪ್ಪ ಗೌಡರಿಂದ ದೂರವಾಣಿ ಕರೆಬಂದಿತು. ಭಟ್ಟರೆ ‌ʼನಮ್ ಮನಿ ಗೊಬ್ರು ಗುಂಡಿಲ್ಲಿ ಒಂದ್‌ ಕರ್ಳು ಬಳ್ಳಿ ಒಣಗಿರೋ ಕರುವದೇ, ಬಂದ್ ನಿಮ್ದೇನಾ ನೋಡಿʼ ಎಂದು ಹೇಳಿ ಫೋನಿಟ್ಟರು. ಚಲಪತಿ ಮತ್ತೆ ಗಜಪತಿ ಕರೆ ಕಟ್‌ ಮಾಡಿದ ವೇಗದಲ್ಲೆ ಹೊರಟರು. ಕರುವನ್ನು ನೋಡಿ ಕರುವಿನ ಕರುಳಬಳ್ಳಿ ಆಗತಾನೇ ಒಣಗಿದಿದ್ದಿದ್ದು ನಿಜ. ಇಬ್ಬರು ನಿರ್ಧರಿಸಿದಂತೆ ಕರುವನ್ನು ಹೊತ್ತು ಮನೆಗೆ ನಡೆದರು. ಹೋಗಿ ಕೊಟ್ಟಿಗೆಯಲ್ಲಿ ಬಿಟ್ಟ ಕೂಡಲೇ ಕರು ಕುಪ್ಪಳಿಸಿ ನೆಗೆದು ತಾಯಿ ದಾಸಿಯ ಹತ್ತಿರ ಹೋಯಿತು. ಜಾತ್ರೆಯಲ್ಲಿ ಕಳೆದೋದ ಮಕ್ಕಳಿಗೆ ಅಮ್ಮ ಸಿಕ್ಕಿದ ಹಾಗೆ. ದಾಸಿಯು ಕೂಡ ಕರುವನ್ನು ಮುದ್ದಿನಿಂದ ನೆಕ್ಕಲು ಶುರುಮಾಡಿದಳು. ಮಗು ಸಿಕ್ಕ ಖುಷಿಗೆ ಮುದ್ದಾಡಿದ ತಾಯಿಯಂತೆ. ದಾಸಿ ಕರುವಿಗೆ ಹಾಲು ಕುಡಿಸಿದಳು. ಹೀಗೆ ಮೂರ್ನಾಲ್ಕು ದಿನ ಬೇರ್ಪಟ್ಟ ತಾಯಿ ಮಗಳು ಒಂದಾಗಿದ್ದವು. ಚಲಪತಿ ಭಟ್ಟರ ಮುಖದಲ್ಲಿ ನೆರದಿದ್ದ ಚಿಂತೆಯ ಗೆರೆಗಳು ಸರಿದು ಮಂದಹಾಸವು ಮೂಡಿತ್ತು. ವಸಂತಕಾಲದಲ್ಲಿ ಕಟ್ಟಿದ ಮೋಡ ಕರಗಿ ನೇಸರನ ಕಿರಣಗಳು ಮೂಡಿದಂತೆ.  


ದಿಬ್ಬಣ

ನೀ ಮುಂಗುರುಳ ಸರಿಸಿ
ನನ್ನನ್ನೂ ಉರುಳಿಸಿ..
ಗರಿಗೆದರಿಸಿದೆ ಹೃದಯದಲ್ಲಿ
ಭಾವನೆಗಳ ದಿಬ್ಬಣ
ಕೂಚು, ನಗಾರಿ, ಕಹಳೆ, ಹಲಗೆ ಹೊರಟಿವೆ ಹೊತ್ತು
ನೀಡಲು ನಿನಗೆ ಪ್ರಪ್ರಥಮ ಆಮಂತ್ರಣ

ಕೆನ್ನೆಗೆ ಅರಶಿಣ ವರಸಿ
ಹಣೆಗೆ ಕುಂಕುಮ ಮುಡಿಸಿ
ಹದಿನೆಂಟು ಮೊಳ ಸೀರೆ ಹೆಗಲಿಗೆ ಹೇರಿಸಿ
ಮನತುಂಬಿ ಹರಸಿ
ಮನೆತುಂಬಲು ಕೋರುತಿವೆ ಸುಸ್ವಾಗತ

ಚಪ್ಪರವ ಹಾಕಿಸಿ
ಮದರಂಗಿ ಬರೆಸಿ
ಮೇಳವನ್ನು ಕರೆಸಿ
ರಂಗೋಲಿ ಹೊಸೆಯಿಸಿ
ಹಸೆಮಣೆಯಲ್ಲಿ ಕೂರಿಸಿ
ತಾಂಬೂಲ ಇರಿಸಿ
ಗಟ್ಟಿಮೇಳದ ಘೋಷಕೆ
ಕಟ್ಟುತ್ತಿವೆ ಕಂಕಣ







HULI HIDIYAA

ಮಲೆನಾಡಿನಲ್ಲಿ ಒಂಟಿ ಮನೆಗಳು ಸಾಮಾನ್ಯ. ಅದರಲ್ಲಿ ನಮ್ಮ ಸುಬ್ಬುವಿನ ಮನೆಯು ಒಂದು, ಸುತ್ತ ಸುರಿಯುವ ಕಾಡು. ಹುಲಿಗಳ ಆರ್ಭಟ, ನರಿಗಳ ಊಳು,ಕಣ್ಣಿಗೆ ಕಾಣದಷ್ಟು ವೇಗವಾಗಿ ಓಡುವ ಕಾಡುಕುರಿ, ಆಗಾಗ ಮನೆಯ ಅಂಗಳದಲ್ಲಿ ಕಾಣುವ ಕಾಟಿಗಳ (ಕಾಡೆಮ್ಮೆ) ಹಿಂಡು, ಅಂಗಳದಲ್ಲಿ ಹಾಕಿ ಹೋದ ರಾಶಿ ಸಗಣಿ, ಸಂಜೆಯಾದ ಮೇಲೆ ಕಾಡುವ ದೆವ್ವ ಮತ್ತು ಭೂತಗಳ ಕೂಗು ಇವೆಲ್ಲಾ ಮಲೆನಾಡಿನ ದೈನಿಂದಿನ ದಿನಚರಿ. ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಸಹಾಯದೊಂದಿಗೆ ಕಟ್ಟಿದ ಎರಡು ರೂಮು, ಒಂದು ಹಾಲ್, ಅಡಿಗೆ ಮತ್ತು ದೇವರ ಮನೆಯನ್ನೋಳಗೊಂಡ ಹಂಚಿನ ಮನೆ. ಮನೆಯ ಸುತ್ತಾ ಅಕೇಶಿಯಾ ಗಳಗಳಿಂದ ವಿಸ್ತರಿಸಿಕೊಂಡ ಕಡಿಮಾಡು ( ಮನೆಯ ನಿಜ ಆಯದ ಸುತ್ತಾ ಶೀಟ್ ಅಥಾವ ಹಂಚನ್ನು ಬಳಸಿ ಬಳಕೆಗೆ ವಿಸ್ತರಿಕೊಳ್ಳುವ ಜಾಗ) . ಅಂಗಳದಲ್ಲಿ ಚಪ್ಪರ ಹಾಕಲು ಕೆಲವೊಮ್ಮೆ ಸುಬ್ಬಣ್ಣ ಮೈ ತಿಕ್ಕಲು ಬಳಸುವ ಕಲ್ಲಿನ ಕಂಬಗಳು. ಕೊಟ್ಟಿಗೆಯಲ್ಲಿ ಎರಡೆಮ್ಮೆ, ಒಂದು ಗೊಡ್ಡು(ಬಂಜೆ) ಗೊಬ್ಬರಕ್ಕೆ ಇನ್ನೊಂದು ಹಾಲಿಗೆ. ಒಂದು ಮಲೆನಾಡ ಗಿಡ್ಡ(ಹಸು) ದೇವರ ಅಭೀಷೇಕ ಮತ್ತು ಮನೆಮದ್ದಿನ ಸಲುವಾಗಿ. ಸುಬ್ಬು ಜಾತಿಯಲ್ಲಿ ಬ್ರಾಹ್ಮಣ. ಜೇವನಕ್ಕೆ ತೋಟದಲ್ಲಿ ಕೃಷಿ, ಮನೆಯಲ್ಲಿ ಹೆಂಡತಿ ಗಿರಿಜಾ. ಮದುವೆಯಾಗಿ ೮ ವರ್ಷವಾದರೂ,ಮಕ್ಕಳಿಲ್ಲ.

ನಿನ್ನ ಹುಲಿ ಹಿಡಿಯ, ಹಾಲಿನ ತಂಬಿಗೆಯನ್ನು ಒದ್ದು ಹಾಕಿದ್ದ ಕೆಂಪಿಗೆ ಸುಬ್ಬು ಬಯ್ಯುತಿದ್ದ. ಹಾಲು ಕರೆಯುತ್ತಿದ್ದ ಗಿರಿಜಾ ಮೆಲದ್ದು ಇನ್ನೊಂದು ಸರಿ ಹುಲಿ ಹಿಡಿಯ ಅಂತ ನಿಮ್ಮ ಬಾಯಲ್ಲಿ ಬಂದ್ರೆ ನಮ್ಮ ಹುಟ್ಟೊ ಮಗುವಿನ ಆಣೆ ಎಂದರಚಿದಳು. ಪ್ರತಿವರ್ಷವೂ, ದನವನ್ನೋ ಅಥವಾ ಕರುವನ್ನೋ ಹುಲಿ ಹಿಡಿಯುವುದು ಇದ್ದದ್ದೇ. ಮಕ್ಕಳಿಲ್ಲದ ಗಿರಿಜಾಳಿಗೆ ಮನೆಯ ಜಾನುವಾರುಗಳೇ ಎಲ್ಲಾ. ಅವಳಿಗೆ ಮಗುವಿಲ್ಲದ ಕೊರಗನ್ನು ದನ ಕರುಗಳೊಂದಿಗೆ ಕಳೆದು ಖುಷಿಯಾಗಿರುತ್ತಿದ್ದಳು. ಸಿಟ್ಟಾಗಿದ್ದ ಸುಬ್ಬು ಮಕ್ಕಳಿಲ್ಲದವಳು ಮಗುವಿನ ಮೇಲೆ ಆಣೆ ಹಾಕುತ್ತಾಳೆಂದು ಹತಾಶೆಯಿಂದ ನಕ್ಕು ಕಣ್ಣಿನ ಅಂಚಿನಲ್ಲಿ ಬಂದ ನೀರನ್ನು ಒರೆಸಿ ಮುಂದಿನ ಕೆಲಸಕ್ಕೆ ಹೆಜ್ಜೆ ಕಿತ್ತ. ಮಕ್ಕಳಿಲ್ಲದವಳು ಎಂಬ ಮಾತು ಕೆಲಸದವರು, ನೆರೆಹೊರೆಯವರು, ಸಂಬಂಧಿಗಳಿಂದ ಕೇಳಿ ಗಿರಿಜಾಳನ್ನು ವರುಷಗಳಿಂದ ಕಾಡುತಿತ್ತು. ಪ್ರತಿಯೊಬ್ಬರ ಮಾತುಗಳು ಜಾನುವಾರಿನ ಎದೆ ಬಗೆಯುವ ಹುಲಿಯುಗುರಿನಷ್ಟು ತೀಕ್ಷ್ಣವಾಗಿ ಅವಳ ಮನಸ್ಸನ್ನು ನಿರಂತರ ಚುಚ್ಚುತ್ತಿದ್ದವು.
ಸುಬ್ಬಣ್ಣ ಸಂಜೆ ಸ್ನಾನ ಮುಗಿಸಿ ಕೂದಲಿಗೆ ಕೊಬ್ಬರಿ ಎಣ್ಣೆ ತಿಕ್ಕತ್ತಾ ಗಿರಿಜಾಳನ್ನು ಕರೆದ, ಓಯ್ ಇವಳೇ, ಕಾಪಿ ಕೊಡೆ, ಆಕಡೆಯಿಂದ ಪ್ರತಿಕ್ರಿಯೆಯಿಲ್ಲ. ಅಯ್ಯಾ ಇವ್ಳು ಹುಲಿ ಹಿಡಿಯ. ಮನೆಯಲ್ಲಾ ಹುಡುಕುತ್ತಾ ನಡೆದ, ಅಡುಗೆಮನೆಯಲ್ಲಿ ಅನ್ನಕ್ಕಿಟ್ಟ ನೀರು ಕೊತ ಕೊತ ಕುದಿಯುತ್ತಿತ್ತು. ದೇವರ ನಂದಾದೀಪ ಆರಿಹೋಗುವುದರಲ್ಲಿತ್ತು. ಸುಬ್ಬು ಚಿಂತಿತನಾಗಿದ್ದ. ಆಚೀಚೆ ನೊಡುತ್ತಿದ್ದಾಗ ರೂಮಿನ ಮೂಲೆಯಲ್ಲಿ ಮುಸು ಮುಸು ಅಳುವ ದನಿ ಕೇಳಿತು. ಮಂಚದ ಮೂಲೆಯಲ್ಲಿ ಕತ್ತಲಲ್ಲಿ ಕೂತು ಅಳುತ್ತಿದ್ದಳು. ರೂಮಿನ ಲೈಟ್ ಆನ್ ಮಾಡಿದ ಸುಬ್ಬು, ಮೂರ್ನಾಲ್ಕು ಬಾರಿ ಪುಳು ಪುಳುವಾಗಿ ಲೈಟ್ಉರಿದುಕೊಂಡಿತು. ಸುಬ್ಬು ಗಿರಿಜಾಳ ಬಳಿ ಕುಳಿತು ಕಣ್ಣೋರೆಸಿದ. ಗಿರ್ಜಿಗೆ ಏನಾಯ್ತು, ಏಕಾಗಿ ಈ ದುಃಖವೆಂದು ಕೇಳಿದ. ಇಡೀ ಊರು ನನ್ನ ಬಂಜೆ ಅನ್ನೋದು ಸಾಲ್ದು ಅಂತ ಈಗ ನೀವು ಹೇಳಿ ಎಂದು ಬಿಕ್ಕಿದಳು .ಅವಳ ಕೆನ್ನೆಗಳನ್ನು ಸವರಿ, ಹಣೆಗೊಂದು ಮುತ್ತಿಟ್ಟ ಸುಬ್ಬು ಅಯ್ಯಾ ಇವ್ಳು ಹುಲಿ ಹಿಡಿಯ ಅಷ್ಟಕ್ಕೆ ಯಾರದ್ರು ಅಳ್ತಾರೇನೆ, ಮುಂದಿನಸರಿ ಪೇಟೆಗೆ ಹೋದಾಗ ಡಾಕ್ಟರ್ ಬಳಿ ಹೋಗಿ ಬರೋಣವೆಂದು ಒಪ್ಪಿದ. ಇವರಿಬ್ಬರ ಹಲವು ಕೂಡಿಕೆಯ ನಂತರವೂ ಅವಳು ಬಸುರಾಗದಿದ್ದನ್ನು ಗಮನಿಸಿದ ಗಿರಿಜಾ ಡಾಕ್ಟರ್ ಬಳಿ ತೆರಳಿದರೆ ಏನಾದ್ರು ಪರಿಹಾರ ಸಿಗಬಹುದುದೆಂದು ಹೇಳುತ್ತಿದ್ದ ಮಾತನ್ನೆ ಸುಬ್ಬು ಕಿವಿಗೆ ಹಾಕಿಕೊಳ್ಳುತ್ತಿರಲಿಲ್ಲ. ದೇವ್ರು ಕೊಟ್ರೆ ಆಗುತ್ತೆ ಅಂತ ಹೇಳಿ, ಗಿರಿಜಾಳ ಕೋರಿಕೆಯನ್ನು ಅಲ್ಲಗಳೆಯುತ್ತಿದ್ದ. ಇಬ್ಬರೂ ಮಕ್ಕಳಿಗಾಗಿ ಹೊರದ ಹರೆಕೆಗಳಿಲ್ಲ, ಮಾಡಲು ಉಳಿದ ವ್ರತ, ಪೂಜೆಗಳಿಲ್ಲ. ಇದೆಲ್ಲವನ್ನೂ ನೋಡಿ ಗಿರಿಜಾಳಿಗೆ ದೇವರ ಮೇಲಿರುವ ನಂಬಿಕೆಯೇ ಹೊರಟು ಹೋಗಿತ್ತು. ಗಿರಿಜಾಳಿಗೆ ಮಕ್ಕಳಿಲ್ಲವೆಂಬ ಕೊರಗುಳಿದರೆ, ಸುಬ್ಬುವಿಗೆ ಹುಲಿ ಹಿಡಿಯ ಬಾಯಿ ಪಾಠವಾಗಿ ಹೊಗಿತ್ತು.
ಬೆಳಿಗ್ಗೆ ಕೆಲಸದವರು ಮೆನಗೆ ಬರುವ ಹೊತ್ತು, ಗಿರಿಜಾ ಟಿವಿಯಲ್ಲಿ ಬರುವ ದಿನಭವಿಷ್ಯ ನೊಡುತ್ತಿದ್ದಳು. ಅದರಲ್ಲಿ ಹೇಳಿದ ವ್ರತ ಪೂಜೆಗಳನ್ನು ಮಾಡಿ ದೇವರ ಬಳಿ ಮಕ್ಕಳಿಗಾಗಿ ಕೋರುವುದು. ಇದುವೆ ಅವಳ ದಿನಚರಿ. ಕೆಲಸಕ್ಕೆ ಬಂದ ಸಿಂಗ ಗಿರಿಜಮ್ಮ ಎಂದಿನಂತೆ ದಿನ ದಿನಭವಿಷ್ಯ ನೋಡುವುದನ್ನು ಗಮನಿಸಿ, ನೊಂದುಕೊಂಡು, ಕಾಪಿ ಕುಡಿದು ಕೈಯಲ್ಲಿ ಹೊಗೆಸೊಪ್ಪು ತಿಕ್ಕುತ್ತಾ, ಇದೆಲ್ಲಾ ಪ್ರಯೋಜನ ಇಲ್ಲಮ್ಮಾ ಯಾವ್ದಾದ್ರು ನಾಟಿ ಮದ್ದು ಮಾಡಿದ್ರೆ ಅಗುತ್ತೆ ನೋಡಿಯಂದು ತಿಳಿದದ್ದು ಹೇಳಿದ. ಸಿಂಗ ಅನಕ್ಷರಸ್ಥನಾದರೂ ಪ್ರಪಂಚವನ್ನು ತಿಳಿದವ. ಗಿರಿಜಾ ಕೇಳಿ ಒಂದು ಕ್ಷಣ ಯೋಚಿಸಿ ಸಂಜೆ ಇವರ ಬಳಿ ಹೇಳಬೇಕು ಎಂದುಕೊಂಡು ಟಿವಿ ನಂದಿಸಿ, ಹುಳಿ ಮಾಡಲು ತರಕಾರಿ ಹೆಚ್ಚಲು ಕುಳಿತಳು. ರಾತ್ರಿ ಊಟ ಬಡಿಸುವಾಗ ಸುಬ್ಬುವಿನ ಬಳಿ ವಿಷಯವನ್ನು ಪ್ರಸ್ತಾಪಿಸಿದಳು. ಸುಬ್ಬು ಒಪ್ಪಲಿಲ್ಲ. ಪೇಟೆಗೆ ಡಾಕ್ಟರ್ ಬಳಿ ಹೊಗಲು ಒಪ್ಪಿದೆ ತಾನೆ ನಿನ್ನೆ, ಇದೇನಿದು ಈಗ ಹೊಸ ಹಠವೆಂದು ರೇಗಿ, ನೆಮ್ಮದಿಯಾಗಿ ಊಟ ಮಾಡಲಾದರು ಬಿಡು ಎಂದ. ಗಿರಿಜಾ ಸುಮ್ಮನಾದಳು. ಇಬ್ಬರು ಊಟ ಮಾಡಿ ಮಲಗಿದರು. ಸುಬ್ಬುವಿಗೆ ಗಿರಿಜಾ ಹೇಳಿದ ವಿಷಯವನ್ನು ಯೋಚಿಸುತ್ತಾ ನಿದ್ರೆ ಬರಲಿಲ್ಲ. ಅವಳಿಗೆ ಹಾಗಾದರು ಸಮಾಧಾನ ಸಿಗಬಹುದೆಂದು ಭಾವಿಸಿ, ಹೇಳಲು ಗಿರಿಜೆಯನ್ನು ಕರೆದ. ಗಿರಿಜಾ ನಿದಿರೆಗೆ ಜಾರಿದ್ದಳು.
ಹೀಗೆ ದಿನಗಳು ಸಾಗುತ್ತಿದ್ದವು. ಸಿಂಗ ಊರಿಗೊಬ್ಬ ನಾಟಿವೈದ್ಯ ಪಾದ್ರಿ ಬಂದಿರುವ ವಿಚಾರವನ್ನು ಸುಬ್ಬಣ್ಣನ ಕಿವಿಗೆ ಹಾಕಿದ. ಮರುದಿನ ಇಬ್ಬರೂ ದೇವರಿಗೆ ತುಪ್ಪದ ದೀಪ ಹಚ್ಚಿ ನಾಟಿವೈದ್ಯ ಪಾದ್ರಿ ಇರುವ ಚರ್ಚಿನ ಬಳಿ ಹೋದರು. ಪಾದ್ರಿ ಔಷದವೊಂದನ್ನು ನೀಡಿ ಮುಂದಿನ ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬರಲು ಹೇಳಿದ್ದ. ಗಿರಿಜಾಳ ನೋಡಿದ ದಿನವೇ ಪಾದ್ರಿಗೆ ಮೈಯಲ್ಲಿ ರೋಮವೆಲ್ಲ ನಿಮಿರಿದ್ದವು. ಇವಳನ್ನು ಪಡೆಯಬೇಕು, ಅನುಭವಿಸಬೇಕೆಂಬ ನೀಚ ಯೋಚನೆಯೊಂದು ಕಪಟಿ ಪಾದ್ರಿಯ ತಲೆಯಲ್ಲಿ ಮೊಳಕೆ ಒಡೆದಿತ್ತು. ಗಿರಿಜಾಳು ಅಂದಗಾತೀಯೆ. ಶ್ರಿಗಂಧದ ಮೈಬಣ್ಣ, ಹಾಲಿನಷ್ಟು ಕೋಮಲ ತ್ವಚೆ, ನೀಳ ಕಣ್ಗಳು, ಕಣ್ಗಳಿಗೆ ತೋರಣ ಕಟ್ಟಿದಂತಿರೋ ಹುಬ್ಬುಗಳು, ಮಾರುದ್ದವಿದ್ದ ದಟ್ಟ ಕೂದಲ ಕೇಶರಾಶಿ, ಕೋಲು ಮುಖ, ಮೂಗಿನ ಅಂದವನ್ನು ಇನ್ನಷ್ಟು ಹೆಚ್ಚುಸುತ್ತಿದ್ದ ಮೂಗುತ್ತಿ, ಹತ್ತಿಯಷ್ಟು ಮೃದುವಾದ ಗಲ್ಲಗಳು, ತುಂಬಿದ ಮೈಕಟ್ಟು, ನಡೆಯುತ್ತಿದ್ದರೆ ಹಸಿವನ್ನು ನೀಗಿಸುವಂಥ ಚೆಲುವು. ಒಟ್ಟಾರೆ ಹೇಳೊದಾದರೆ ಬಚ್ಚನಿನ ಎತ್ತರ, ಶ್ರೀದೇವಿಯ ಸೌಂದರ್ಯ. ಇದೆಲ್ಲವನ್ನು ಯೋಚಿಸಿದ ಲಂಪಟ ಪಾದ್ರಿ ತನ್ನ ಸಹಾಯಕರಿಗೆ ರಜೆ ತೆಗೆದುಕೊಳ್ಳಲು ಹೇಳಿ, ಮರುದಿನದ ಭೇಟಿಗಳನ್ನು ರದ್ದುಗೊಳಿಸಿ ಗಿರಿಜೆಗಾಗಿ ಹೊಂಚು ಹಾಕಿ ಹಸಿದ ನರಿಯಂತೆ ಕಾದು ಒಬ್ಬನೇ ಕುಳಿತಿದ್ದ.
ಗಿರಿಜಾ ಬೆಳಿಗ್ಗೆ ಹೊರಟು ಸುಬ್ಬುವಿಗಾಗಿ ಕಾದಳು. ಸುಬ್ಬು ಜರೂರಾದ ಕೆಲಸವೊಂದಿದೆ ಹೋಗಲೆಬೇಕು, ನೀನು ಮಾಣಿಯ ರಿಕ್ಷಾಕ್ಕೆ ಪೋನ್ ಮಾಡಿ ಬರಹೇಳು. ಕೆಲಸ ಕೂಡಲೇ ಮುಗಿಸಿ, ವಾಪಸ್ಸು ಕರೆದುಕೊಂಡು ಬರುತ್ತೇನೆ ಎಂದ. ಒಪ್ಪಿ ಗಿರಿಜಾ ಸೆರೆಗಿನಲ್ಲಿ ನಿರೀಕ್ಷೆಗಳ ಉಡಿಯನ್ನು ತುಂಬಿಕೊಂಡು ರಿಕ್ಷಾದಲ್ಲಿ ಹೊರಟಳು. ರಿಕ್ಷಾದಿಂದ ಇಳಿಯುವಾಗ ಚರ್ಚಿನ ಖಾಲಿ ಆವರಣ ನೋಡಿ ಜನವಿನ್ನು ಬಂದಿಲ್ಲ, ಬಂದ ಕೆಲಸ ಬೇಗ ಮುಗಿಸಬಹುದು ಅಂದುಕೊಂಡು ಪಾದ್ರಿಯ ಕೋಣೆಯ ಕಡೆಗೆ ಹೆಜ್ಜೆ ಹಾಕಿದಳು. ಆದರೂ ಬಣಗುಟ್ಟುತ್ತಿದ್ದ ಜಾಗವನ್ನು ನೋಡಿ ಮನದ ಮೂಲೆಯೊಮ್ಮೆ ಕಂಪಿಸಿತು. ಹನುಮಾನ್ ಚಾಲಿಸ ಮಂತ್ರವನ್ನು ಪಠಿಸುತ್ತಾ ತನಗೆ ಧೈರ್ಯ ಹೇಳಿಕೊಂಡು ಒಳಹೋದಳು. ಅಂದವಾಗಿ ಕಾಟನ್ ಸೀರೆಯುನ್ನುಟ್ಟು ನಡೆದು ಬರುತ್ತಿದ್ದ ಗಿರಿಜೆಯನ್ನು ನೋಡಿ ಪಾದ್ರಿ ಬಾಯಿ ಚಪ್ಪರಿಸಿದ. ಏಸುವಿನ ವಿಗ್ರಹದ ಕೆಳಗೆ ಉರಿಯುತಿದ್ದ ಮೊಂಬತ್ತಿ, ಮಾತನಾಡಿದ ಮರುದ್ವನಿ ಕೇಳುವ ಮುಚ್ಚಿದ ಕೊಠಡಿ. ಮನದ ಮೂಲೆಯಲ್ಲಿದ್ದ ಭಯವೀಗ ಬೆಟ್ಟದಷ್ಟು ಕಾಡಲು ಶುರುವಾಗಿತ್ತು. ಪಾದ್ರಿಯ ಮಾತಿನಂತೆ ಅವನ ಎದುರಿದ್ದ ಸ್ಟೂಲ್ ಮೇಲೆ ಗಿರಿಜಾ ಕುಳಿತಳು. ಬಿಳಿಯ ಗೌನು, ಫ್ರೆಂಚ್ ಗಡ್ಡ, ಡೈ ಹಾಕಿದ ಕೂದಲು, ಕೊರಳಿಗೆ ಮತ್ತು ಕೈಯಲ್ಲೊಂದು ಶಿಲುಬೆಯ ಮಾಲೆ. ಬಾಗಿಲಿನ ಎತ್ತರ, ಅಗಲವಾದ ಎದೆ, ಸಜ್ಜನನಂತೆ ಮುಖವಾಡ ಧರಿಸಿ ಒಳಗೆ ಕ್ಷತ್ರಮ ಉದ್ದೇಶಗಳು, ಇನ್ನೊಂದು ಕೈಯಲ್ಲಿ ಬೈಬಲ್ ಗ್ರಂಥವನ್ನುಇಟ್ಟುಕೊಂಡಿದ್ದ. ಅಲ್ಲೇ ಪಕ್ಕದಲ್ಲಿದ್ದ ಪಾತ್ರೆಯಿಂದ ಗಿರಿಜಾಳ ತೆಲೆಗೆ ನೀರನ್ನು ಪ್ರೋಕ್ಷಿಸಿದ. ಮದ್ದನ್ನು ಕೊಡುವ ನೆಪದಲ್ಲಿ ಕೈ ಸವರಿದ. ತಲೆಮೇಲೆ ಕೈಯಿಡುವ ನಾಟಕವಾಡಿ ಹೆಗಲನ್ನು ಬಳಸಿದ. ಏನು ಮಾಡಬೇಕೆಂದು ತೋಚದ ಗಿರಿಜೆ ಭಯದಿಂದ ಮೇಲೆದ್ದು ಕೂಗಿಕೊಳ್ಳಲು ಮುಂದಾದಳು. ಪಾದ್ರಿ ಕೈಗಳನ್ನು ಬಳಸಿ ಅವಳ ಬಾಯಿಯನ್ನು ಅಮುಕಿ, ಸರೆಗೆಳೆದ. ಸೀರೆ ಪಾದ್ರಿಯ ಕೈಯಲ್ಲುಳಿಯಿತು. ಗಿರಿಜೆ ಕೊಠಡಿಯ ಮೂಲೆಯಲ್ಲಿ ಕುಳಿದಳು. ಹಸಿದ ಹುಲಿ ಜಿಂಕೆಯ ಮೇಲೆ ಎರಗುವ ಮಾದರಿಯಲ್ಲಿ ಎರಗಲು ಮುಂದಾದ, ಗಿರಿಜಾ ಕಿರುಚಿದಳು. ಅದೇ ಸಮಯಕ್ಕೆ ಸರಿಯಾಗಿ ಚರ್ಚಿನ ಗಂಟೆ ಬಾರಿಸಿತು. ಬಾಗಿಲು ತೆರೆದು ಕಳ್ಳ ಬೆಕ್ಕಿನಂತೆ ನಡೆದ ಕಾಮುಕ ಪಾದ್ರಿ. ಸೀರೆ ಸುತ್ತಿಕೊಂಡು ಗಿರಿಜಾ ಓಡಿದಳು. ಸುಬ್ಬು ಬಂದಿರಲಿಲ್ಲ. ಅಂದು ಗಿರಿಜೆಯ ಮಾನ ಏಸು ಕಾಪಾಡದಿದ್ದರೂ, ಚರ್ಚನ್ನು ಸ್ವಚ್ಛಗೊಳಿಸುವಾಕೆ ಕಾಪಡಿದ್ದಳು.
ಮರ್ಯಾದೆಗೆ ಅಂಜಿ ಮನೆಗೆ ಬಂದ ಗಿರಿಜಾ ಚರ್ಚಿನಲ್ಲಿ ನಡೆದ ಘಟನೆಯನ್ನು ಯಾರಲ್ಲೂ ಹೇಳಲಿಲ್ಲ. ಮಕ್ಕಳಿಲ್ಲವೆಂಬ ಕೊರಗನ್ನು ನುಂಗಿ ಕೊಂಡಂತೆ ಬೆಳಿಗ್ಗೆ ನಡೆದದ್ದನ್ನು ತನ್ನೋಳಗೆ ಹೂತಾಕಿದ್ದಳು. ದಿನವಿಡಿ ಮೌನವಾಗಿದ್ದಳು, ಗರಬಡಿದವರಂತೆ, ಸುಬ್ಬು ಕೇಳಿ ಕಾಳಜಿ ತೋರಿದರು ಗಿರಿಜೆ ಬಾಯಿ ಬಿಡಲಿಲ್ಲ. ರಾತ್ರಿ ನಿದ್ರೆಯಲ್ಲಿ ಬೆಚ್ಚಿಬೀಳುತ್ತಿದ್ದಳು. ಸುಬ್ಬು ಸಂತೈಸಲು ಅವಳನ್ನು ತಬ್ಬಿದ. ಗಿರಿಜಾಳ ಭಯ ಸುಬ್ಬುವಿನ ಪ್ರಣಯಕ್ಕೆ ಸೋತಿತ್ತು. ಇಬ್ಬರು ರಾತ್ರಿ ಕೂಡಿದ್ದರು. ಭಯದ ಅಮಲಿಗೋ, ಊರಿನವರ ಕನಿಕರವೋ, ದೇವರ ಕೃಪೆಯೋ, ತಿಂಗಳುಗಳಲ್ಲಿ ಗಿರಿಜಾ ಸಿಹಿ ಸುದ್ದಿ ನೀಡಿದ್ದಳು. ಇಬ್ಬರ ಸುಖ, ಸಂತೋಷಗಳು ಮೆನಯಲ್ಲಿ ಕಳೆ ಕಟ್ಟಿತ್ತು. ಸುಬ್ಬು ಖುಷಿಯಲ್ಲಿ ನಿನ್ನ ಹುಲಿ ಹಿಡಿಯ ಎಂದು ಗಿರಿಜೆಯನ್ನು ದೇವರನ್ನು ಹೋರುವ ರಥದಂತೆ ಹೊತ್ತು ಊರಿಗೆಲ್ಲ ಸುದ್ದಿ ಮುಟ್ಟಿಸಿದ್ದ, ಸೀಮಂತವನ್ನು ಸೀಮೆಗೆಲ್ಲ ಹೇಳಿ ಭರ್ಜರಿಯಾಗಿ ನೆರೆವೆರಿಸಿದ. ಕೆಲವೇ ದಿನಗಳಲ್ಲಿ ಗಿರಿಜಾ ಅವಳಿ ಗಂಡು ಮಕ್ಕಳನ್ನು ಹೆತ್ತಳು. ಸುಬ್ಬುವಿನ ಸಂತೋಷ ಹೇಳತೀರದು, ಹಿಗ್ಗಿ ಹಿಗ್ಗಿ ಹಾರಿದ್ದ. ಇದೆ ಹುರುಪಿನಲ್ಲಿ ಅವಳಿಗಳ ನಾಮಕರಣವನ್ನು ಮುಗಿಸಿದ.
ವಸಂತಗಳು ಕಳೆದವು, ಮಕ್ಕಳು ದೊಡ್ಡವಾದವು. ಮನೆಯ ಹೊಸಿಲು ದಾಟಿ ಜಗಲಿ ಬಳಸಿ ಅಂಗಳಕ್ಕೆ ಮಣ್ಣಾಟಕ್ಕೆ ಅಂಬೆ ಹರಿಯಲು ಶುರು ಮಾಡಿದ್ದವು. ಮುಸ್ಸಂಜೆಯ ಸಮಯ. ಸುಬ್ಬು ಮತ್ತು ಜೊತೆಯ ಕೆಲಸದವರು ಗದ್ದೆ ಹೊರೆ (ಕುಯ್ದ ಭತ್ತದ ಪೈರನ್ನು ಹೊತ್ತು ಮನೆಯ ಕಣಕ್ಕೆ(ಭತ್ತ, ಪೈರನ್ನು ಬೇರೆ ಮಾಡುವ ಜಾಗ) ತರುವ ಪ್ರಕ್ರಿಯೆ) ಹುಲಿಯೋ ಹುಲಿ (ಕೊನೆಯ ಹೊರೆಗಳನ್ನು ಹೊತ್ತು ತರುವಾಗ ಹೇಳುವ ಮಲೆನಾಡಿನ ಸಂಪ್ರದಾಯ) ಎಂದು ಎಲ್ಲರೂ ಕೂಗುತ್ತಾ ಕಣದ ಕಡೆಗೆ ಹೊರಟಿದ್ದರು. ದನದ ಕರುವಿಗಾಗಿ ಕಣದ ಮೂಲೆಯಲ್ಲಿ ಹೊಂಚು ಹಾಕಿ ಕುಳಿತಿತ್ತು ಹುಲಿ. ಕಣದ ಪಕ್ಕವೇ ಕೊಟ್ಟಿಗೆ. ಅಲ್ಲೇ ಹಾಲು ಕರೆಯುತ್ತಿದ್ದ ಗಿರಿಜಾಳನ್ನು ಹುಲಿ ಗಮನಿಸಿತ್ತು. ಹುಲಿಯ ದೃಷ್ಠಿ ಅಂಗಳದಲ್ಲಿ ಆಟವಾಡುತ್ತಿದ್ದ ಮಕ್ಕಳೆಡೆಗೆ ಹೊರಳಿತು.. ಚಂಗನೇ ಎಗರಿ ಮಗುವೊಂದನ್ನು ಕಚ್ಚಿ ಪೊದೆಯಲ್ಲಿ ಮರೆಯಾಯಿತು. ಕೊಟ್ಟಿಗೆಯಲ್ಲಿ ಹುಲಿಯನ್ನು ನೋಡಿದ ಕೆಂಪಿ ಕುಮುಟಿತ್ತು(ಹೆದರುವುದು). ಗಿರಿಜೆ ಹಾಲಿನ ಪಾತ್ರೆ ಅಲ್ಲೆ ಬಿಟ್ಟು ಇನ್ನೊಂದು ಮಗುವನ್ನು ಎತ್ತಿಕೊಳ್ಳಲು ಓಡಿದಳು. ಅಷ್ಟರಲ್ಲೇ ಸುಬ್ಬುವು ಕಣದಿಂದ ಮನೆಗೆ ಧಾವಿಸಿದ. ಗಿರಿಜಾ ಮಗುವನ್ನು ಎತ್ತಿಕೊಂಡು ಮೆನಯ ದಾರಂದಕ್ಕೆ ಕಂಗೆಟ್ಟು ಕುಸಿದು ಕೂತಳು, ಸುಬ್ಬು ಚಪ್ಪರದ ಕಂಬಕ್ಕೆ ಒರಗಿ ಅಯ್ಯೋ ನಿನ್ನ ಹುಲಿ ಹಿಡಿಯ... ಅಳುತ್ತಾ ಕುಸಿದ. ಜೊತೆಯಿದ್ದವರು ಹುಲಿಯನ್ನು ಹುಡುಕಿ ಹೊಡೆಯಲು ನಾಡಕೋವಿ, ಕತ್ತಿ, ಕೆತ್ತಿಟ್ಟ ಹಾರೆಯ (ಮಣ್ಣನ್ನು ತೆಗೆಯಲು ಬಳಸುವ ಕಬ್ಬಿಣದ ಸಾಧನ ಕಾವು(ಮರದ ಉದ್ದನೆಯ ಹಿಡಿ) ಹಿಡಿದು ಹೊರಟರು. ಸುಬ್ಬುವಿಗೆ ವಿಪರೀತ ಗಾಬರಿಯಾಗಿ ಎಚ್ಚರವಾಯಿತು, ಈಗತಾನೇ ತುಂಬಿದ್ದ ಸಂಸಾರಕ್ಕೆ ಬರಸಿಡಿಲು ಬಡಿದ ಭಾವನೆ. ಗಿರಿಜಾಳೂ ಎದ್ದಳು, ಸುಬ್ಬು ಕಂಡ ದುಸ್ವಪ್ನವನ್ನು ವಿವರಿಸಿದ. ಗಿರಿಜಾ ಸಮಯ ನೋಡಿದಳು, ಬೆಳಿಗಿನ ಜಾವ ಸರಿದಿತ್ತು. ಗಿರಿಜಾ ಸುಬ್ಬುವಿನ ಮುಖ ನೋಡಿದಳು. ಸುಬ್ಬು ಅಂದಿನಿಂದ ಹುಲಿ ಹಿಡಿಯ.. ಹೇಳೊದಿಲ್ಲವೆಂದು ಹೆಂಡತಿಯ ಬಳಿ ಪ್ರಮಾಣ ಮಾಡಿದ. ಅದೆ ಸಮಯಕ್ಕೆ ಸರಿಯಾಗಿ ಬೆಳಗಿನ ಅಲರಾಂ ಕಿರ್ರನೆ ಬಡಿದುಕೊಂಡಿತು.


ದೇಶಸೇವಾಗ್ರರು

ದೇಶಸೇವಾಗ್ರರು


ಸಂಘದಕ್ಷ, ಸಾವಧಾನ್, ವಿಶ್ರಾಮ್  ಈ ಶಬ್ದಗಳನ್ನು ಕೇಳಿದೊಡನೆ ಗಮನ ಎಲ್ಲೇ ಇದ್ದರೂ ಕಿವಿ ನಿಮಿರೇಳುತ್ತದೆ. ಸೇವಾನಿರತೆ , ಶಿಸ್ತು,ಬದ್ಧತೆ, ಕಷ್ಟ ಸಹಿಷ್ಣುತೆ  ಮೊದಲಾದ ಗುಣಗಳು ಸಂಘದ ಮೊದಲ ಪಾಠಗಳು. ಒಂದರ್ಥದಲ್ಲಿ ಶಿಸ್ತಿಗೆ ಸಮಾನಾರ್ಥಕವೇ ಸಂಘ.  ಮಳೆ, ಗಾಳಿ, ಅತಿವೃಷ್ಟಿ ಮುಂತಾದ ಪ್ರಕೃತಿ  ವಿಕೋಪಗಳಾದಾಗ, ಅಲ್ಲಿಗೆ ಎಲ್ಲರ ಮುಂಚೆ ಕಂದು ಚಡ್ಡಿಯ ಸ್ವಯಂ ಸೇವಕರು ಹಾಜರಿರುತ್ತಾರೆ. ಹಲವಾರು ಸ್ಥಳಗಳಲ್ಲಿ ರಕ್ಷಣಾ ಪಡೆಯ ಯೋಧರು ಆಗಮಿಸುವ ಮುನ್ನವೇ ಸ್ವಯಂ ಸೇವಕರು ಪರಿಹಾರ ಕಾರ್ಯಾಚರಣೆಯನ್ನುಪ್ರಾರಂಭಿಸಿಯಾಗಿರುತ್ತದೆ. ಹಗಲು, ಇರುಳು, ಚಳಿ, ಮಳೆ, ಬಿಸಿಲು, ಗಾಳಿ, ಊಟ , ತಿಂಡಿಯ ಪರಿವಿಲ್ಲದೆ  ಸದಾ  ಸೇವೆಯ ಅವಶ್ಯಕತೆ ಇರುವಲ್ಲಿ  ಸ್ವಯಂ ಸೇವಕರು ಸನ್ನದ್ಧ.
ಸೇನೆಯನ್ನು ಹೊರತುಪಡಿಸಿ ಇತರೆ ಯಾವುದೇ ಸಂಘಟನೆಗಳು ತುರ್ತು ಸಂದರ್ಭಗಳಲ್ಲಿ ಪರಿಹಾರ ಕಾರ್ಯಗಳನ್ನು ನಿರ್ವಹಿಸುತ್ತಿದ್ದರೆ  ಅದನ್ನು ತನ್ನ ಪ್ರಚಾರಕ್ಕೆ ಬಳಸಿಕೊಳ್ಳುವುದರಲ್ಲಿ ಸ್ವಲ್ಪವೂ ಹಿಂಜರಿಯುವುದಿಲ್ಲ.ಆದರೆ  ಈ ಮಾತು ಸಂಘದ ವಿಷಯದಲ್ಲಿ ಅಪವಾದವಾಗಿದೆ. ಘಟನಾ ಸ್ಥಳ ಹೊರತುಪಡಿಸಿ ಹೊರ ಜಗತ್ತಿಗೆ ಸಂಘದ ನಿಸ್ವಾರ್ಥ ಸೇವೆಯ ಬಗ್ಗೆ ಅರಿವೇ ಇರುವುದಿಲ್ಲ.  ಹೊಗಳಿದರೂ, ತೆಗಳಿದರೂ, ಯಾವುದೇ ಆರೋಪಗಳನ್ನು ಹೊರಿಸಿದರೂ  ಸಂಘದ ಉತ್ತರ, ಕೋಣದ ಮೇಲೆ ಮಳೆ ಹುಯ್ದಂತೆ. ಏಕೆಂದರೆ  ಸೇವೆಯೇ ಸಂಘದ ಉಸಿರು.ಇಂದಿನ ಮಾಧ್ಯಮಗಳು  ಕೂಡ ರಾಷ್ಟ್ರ ರಕ್ಷಕರ ಸೇವೆಯನ್ನು ಬಿತ್ತರಿಸುವಲ್ಲಿ ಯಾವುದೇ ಪ್ರಯತ್ನ ಮಾಡದಿರುವುದು ಖೇದಕರ.  
ಕೆಲವು ದಿನಗಳ ಹಿಂದೆ ಪ್ರಾಯಶಃ  ಪ್ರತಿಯೊಬ್ಬರೂ ತಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಎಲ್ಲಿದ್ದನೋ ವರುಣ,  ಚಿಕ್ಕಸೂಚನೆಯನ್ನೂ  ನೀಡದೆ ಅಬ್ಬರಿಸಿ ಬೊಬ್ಬಿರಿದು ಕೊಡಗು ಮತ್ತು ಕೇರಳದ ಬಹುಭಾಗಗಳನ್ನು ಆಕ್ರಮಿಸಿಕೊಂಡ. ಜನ ಜೀವನ ಅಸ್ತವ್ಯಸ್ತ. ಜನ ಅಕ್ಷರಶಃ ಬೀದಿಗೆ ಬಂದರು .ಪ್ರವಾಹ ಪರಿಸ್ಥಿಯಿಂದಾಗಿ ತಲೆದೋರಿದ ರಸ್ತೆ ಕುಸಿತ ,ಭೂಕುಸಿತಗಳು ರಕ್ಷಣೆಯ ಎಲ್ಲಾ ಸಾಧ್ಯತೆಗಳಿಗೆ ತಡೆಗೋಡೆಗಳಾಗಿ,  ಜನರ ಜೀವನವನ್ನು ಮತ್ತಷ್ಟು ಕಂಗಾಲಾಗಿಸಿದವು. ನೋಡಿದಲೆಲ್ಲಾ ಕೆಂಪು ನೀರಿನ ಓಕುಳಿ, ರಕ್ಷಣೆಗಾಗಿ ಜನರ ಆಕ್ರಂದನ. ಪರಿಸ್ಥಿತಿಯನ್ನು ಅರಿತ ಸಂಘ, ಎಂದಿನಂತೆ ತನ್ನ ಸೇವಾಭಾರತಿ ಸಂಸ್ಥೆಯ ಮುಖೇನ ಪ್ರವಾಹ ಸಂತ್ರಸ್ತರ ಪುನರ್ವಸತಿ ಸೇವೆಯನ್ನು ಯುದ್ದೋಪಾದಿಯಲ್ಲಿ ಆರಂಭಿಸಿತು . ಸೇನಾಪಡೆಗಿಂತಲೂ ಒಂದು ಹೆಜ್ಜೆ ಮುನ್ನ ಪರಿಹಾರ ಕಾರ್ಯಕ್ಕೆ ಧುಮುಕಿದ  ಸಂಘ, ಪ್ರಕೃತಿ ವಿಕೋಪಕ್ಕೆ ಸಿಲುಕಿ ಜೀವನ್ಮರಣ ಸ್ಥಿತಿಯಲ್ಲಿ ಪರಿತಪಿಸುತ್ತಿದ್ದ ಅಸಂಖ್ಯಾತ  ಜನರನ್ನುಸತತವಾಗಿ ಜೀವದ ಹಂಗು ತೊರೆದು, ರಕ್ಷಿಸಿ ಮೆಚ್ಚುಗೆಗೆ ಪಾತ್ರರಾದರು. ಕಣ್ಮುಂದೆಯೇ ಕುಸಿಯುತ್ತಿದ್ದ ಗುಡ್ಡ, ಬೆಟ್ಟ, ಭಾರಿ ಸೆಳೆತದಿಂದ ಆಪತ್ತಿನಲ್ಲಿ ಹರಿಯುತ್ತಿದ್ದ ನದಿಗಳನ್ನು ದಾಟಿ ಪ್ರವಾಹ ಸಂತ್ರಸ್ತರನ್ನು ಸಾವಿರಾರು ನಿಸ್ವಾರ್ಥಿ ಸ್ವಯಂ ಸೇವಕರು ಜೊತೆಗೂಡಿ ಕಾಪಾಡಿದರು .ಸ್ಥಳೀಯ ಸೇವಕರು ಮಾತ್ರವಲ್ಲದೆ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು,ಬೆಂಗಳೂರು, ಮಂಡ್ಯ, ಹಾಸನ ಅಲ್ಲದೇ ರಾಜ್ಯದ ಇತರ  ಭಾಗಗಳಿಂದ ಸ್ವಯಂ ಸೇವಕರು ಸಂತ್ರಸ್ತರ ನೆರೆವಿಗೆ ಧಾವಿಸಿದ್ದರು.

ಇದು ಸಂಘದ ಸೇವಾ ವೃತ್ತಿಯ  ಒಂದು ಉದಾಹರಣೆ . ರಾಷ್ಟ್ರೀಯ ಸಂಘದ ಸ್ಥಾಪನೆಯ ನಂತರ ಸಮಾಜದಲ್ಲಿ ಜರುಗಿದ ದುರಂತ ಕ್ಷಣಗಳಲ್ಲಿ ಸಂಘ ದೇಶಕ್ಕೆ ಭುಜಬಲವನ್ನು ನೀಡಿದೆ. ಅಂತಹ ಹಲವು ಸೇವಾ ಪಟ್ಟಿ ಕೆಳಕಂಡಂತಿದೆ:  
ಭಾರತದ ಸ್ವಾತಂತ್ರ್ಯ ಸಂಗ್ರಾಮ: ಸಾಮೂಹಿಕ ತರಗತಿಗಳ ಮೂಲಕ ಸ್ವಯಂ ಸೇವಕರಿಗೆ ಮತ್ತು ಸಾರ್ವಜನಿಕರಿಗೆ ಸ್ವಾತಂತ್ರ್ಯದ ಅಗತ್ಯ  ಮತ್ತು ಪಡೆಯುವ ವಿಧಾನವನ್ನು, ಸ್ವರಕ್ಷಣೆ ಮತ್ತು ಹೋರಾಟದ ವಿಧಾನಗಳ ಬಗ್ಗೆ ಶಿಕ್ಷಣವನ್ನು ನೀಡಿತು.
ಭಾರತದ ವಿಭಜನೆ: ವಿಭಜನೆ ಬಿಸಿಯನ್ನು ಅನುಭವಿಸಿದ ಎಲ್ಲಾ ಧರ್ಮಗಳ ಲಕ್ಷಾಂತರ  ಜನರನ್ನು ರಕ್ಷಿಸುವಲ್ಲಿ ಸಂಘದ ಪಾತ್ರ ಮಹತ್ವದ್ದು. ಈ ಕಾರ್ಯವನ್ನು ಮೆಚ್ಚಿದ ಭಾರತ ರತ್ನ ಭಗವಾನ್ ದಾಸ್ ರು ಸ್ವಯಂ ಸೇವಕರನ್ನು "Highly Spirited and self Sacrifying Boys " ಎಂಬ ಬಿರುದನ್ನೂ ನೀಡಿದರು.
ಚೀನಾ -ಭಾರತ  ಯುದ್ಧ: ಗಾಯಗೊಂಡ ಸಾವಿರಾರು ಸೈನಿಕರನ್ನು ಶಿಬಿರಗಳಿಗೆ  ಸ್ಥಳಾಂತರಿಸಿ, ವೈದ್ಯಕೀಯ ಸೇವೆ  ಒದಗಿಸುವುದರಲ್ಲಿ ನೆರವಾದರು . ಸಂಘದ ಕಾರ್ಯವನ್ನು ಶ್ಲಾಘಿಸಿ ಅಂದಿನ ಪ್ರಧಾನಿ ನೆಹರು   ಸ್ವಯಂ ಸೇವಕರನ್ನು 1963 ರ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಭಾಗವಹಿಸುವಂತೆ ಆಹ್ವಾನಿಸಿದರು.
ಪಾಕಿಸ್ತಾನ -ಭಾರತ ಯುದ್ಧ : ಸೈನಿಕರ ಅಗತ್ಯತೆ ಕಂಡ ಶಾಸ್ತ್ರೀಜಿ ಸಂಘದ ಸ್ವಯಂ ಸೇವಕರನ್ನು ದೆಹಲಿ ಮತ್ತು ದೇಶದ ಹಲವು ಭಾಗಗಳಲ್ಲಿ ತಾತ್ಕಾಲಿಕ ಸಂಚಾರಿ ಪೊಲೀಸರಾಗಿ ಕಾರ್ಯನಿರ್ವಹಿಸುವಂತೆ ವಿನಂತಿಸಿಕೊಂಡರು.  ಅದರಂತೆ  ಸತತ 22 ದಿನಗಳ ಕಾಲ ಸ್ವಯಂ ಸೇವಕರು ದೇಶಸೇವೆ ಮೆರೆದರು. 
ಬಾಂಗ್ಲಾ ವಿಮೋಚನೆ: ಕಾನೂನನ್ನು ಕಾಪಾಡಲು ಮತ್ತು ಅಗತ್ಯ ರಕ್ತ ದಾನಕ್ಕೆ ಮೊದಲು ಧುಮುಕಿದ್ದು  ಸಂಘದ ಸ್ವಯಂ ಸೇವಕರು.
ತುರ್ತು ಪರಿಸ್ಥಿತಿ : ಇಂದಿರಾ ಗಾಂಧಿ ಸಂಘವನ್ನು ಬಹಿಷ್ಕರಿಸಿದ್ದರೂ , ಸಾವಿರಾರು ಸೇವಕರು ತಳಮಟ್ಟದಲ್ಲಿ ಭಾಗವಹಿಸಿ ಪ್ರಜಾಪ್ರಭುತ್ವವನ್ನು ಪುನಃ  ಸ್ಥಾಪಿಸುವಲ್ಲಿ ಯಶಸ್ವಿಯಾದರು.

1971 ಒಡಿಶಾ ಚಂಡಮಾರುತ, 1977 ಆಂಧ್ರ ಚಂಡಮಾರುತ, 1984 ಭೋಪಾಲ್ ಅನಿಲ ದುರಂತ , 2001 ಗುಜರಾತ್ ಭೂಕಂಪ, 2004 ರ ಬಂಗಾಳ ಕೊಲ್ಲಿಯ ಭೂಕಂಪ, 2006 ಸೂರತ್ ಪ್ರವಾಹ, 2013 ಉತ್ತರಖಾಂಡದ ಮೇಘಸ್ಪೋಟ, 2014 ರ ಕಾಶ್ಮೀರ ಪ್ರವಾಹ, ಹೀಗೆ ಬರೆದಷ್ಟು ಮುಗಿಯದು ಸಂಘದ ಸೇವಾ ಪ್ರವರ. ಸಾಮಾನ್ಯ ಜನರಿಗೆ ಜಾತಿ, ಮತ, ಪಂಥ  ಮತ್ತು ಧರ್ಮದ ಭೇದವನ್ನು ಮರೆತು ಪ್ರಕೃತಿ ವಿಕೋಪಗಳಲ್ಲಿ ಹಾಗೂ ಇತರೆ ತುರ್ತು ಸಂದರ್ಭಗಳಲ್ಲಿ ವಿಕೋಪ ಬಾಧಿತ ಹಳ್ಳಿಗಳನ್ನು ಪುನರ್ನಿರ್ಮಿಸುವಲ್ಲಿ,  ಸಂತ್ರಸ್ತರ ಪುನರ್ವಸತಿ, ವೈದ್ಯಕೀಯ ಸಹಾಯ ಒದಗಿಸುವಲ್ಲಿ ರಾಷ್ಟ್ರಿಯ ಸ್ವಯಂ ಸೇವಕ ಸಂಘ ಅಂದು ಇಂದು ಎಂದೆಂದೂ ಒಂದು ಹೆಜ್ಜೆ ಮುಂದು. ಸ್ವಂತ ಸ್ವಾರ್ಥಗಳನ್ನು  ಬದಿಗಿಟ್ಟು ದೇಶಸೇವೆಗೆ ಓಗೊಟ್ಟು  ದೇಹವನ್ನು ದಂಡಿಸುವ ಸೇವಕರು ರಾಷ್ಟ್ರೀಯ ಸಂಘದಲ್ಲಿ ಹೊರತು ಪಡಿಸಿ ಬೇರೆಲ್ಲಿ ಸಿಗುತ್ತಾರೆ ಅಲ್ವಾ ?

The Stranger Kisses

The Stranger Kisses

ಮಿಣಿ ಮಿಣಿ ಹೊಳೆಯುವ ಸಮುದ್ರ, ದೂರದೊಲ್ಲೊಂದು 
ಹಾಯುತ್ತಿರುವ ಹಡಗು. ದೋಣಿಗಳಲ್ಲಿ ಮೀನಿಗೆ ಬಲೆ 
ಬೀಸುತ್ತಿರುವ ಮೊಗವೀರರು. ಆಕಾಶದಲ್ಲಿ  ಪ್ಯಾರಚೂಟ್ನಲ್ಲಿ 
ಹಾರುತ್ತಿರುವ ಪ್ರಣಯ ಪಕ್ಷಿಗಳು. ಕೆಳಗೆ ದಡದಲ್ಲಿ ಕುರುಕಲು ತಿಂಡಿ, ನಿಂಬೂ ಸೋಡಾ ಮಾರುತ್ತಿರುವ ಪೆಟ್ಟಿಗೆ ಅಂಗಡಿಗಳು. ಸೂರ್ಯಸ್ನಾನ ಮಾಡಲು ಕಿನಾರೆಯಲ್ಲಿ 
ಹುಟ್ಟುಡುಗೆಯಲ್ಲಿ ಅಲೆಯುತ್ತಿರೋ ನೂರಾರು  ಪರ-ದೇಶಿಗಳು. ಅವರನ್ನು ನೊಡಲೆಂದೆ ಬರುವ ದೇಶಿ ಹುಡುಗರು. ನಗರದ ಜಂಜಾಟಗಳಿಗೆ ಬೇಸತ್ತು ಜೀವನದಲ್ಲಿ  ಎಲ್ಲಾ 
ಮುಗಿಯಿತೆಂಬತೆ ಬಿಯರ್, ಸಿಗರೇಟ್‌ ಹಿಡಿದು ಕೂಳಿತಿರೋ 
ಇಂದಿನ ಯಂಗ್‌ ಜೆನೆರೆಷನ್.

ವಾರಾಂತ್ಯ ಸುಮ್ಮನೆ ಮನೆಯಲ್ಲಿ ಹಾಯಾಗಿ ಕಳೆಯುವ 
ಸಮಯ. ಗುರುವಾರ ಸಂಜೆ‌ ಆದಿಯ ವಾಟ್ಸಪ್‌  ರಿಂಗಣಿಸಿತು. 
ಆದ್ಯಾ ವೀಕೆಂಡ್‌ ಪ್ಲಾನ್ಸ ಕೇಳಿದಳು. ಏನಿಲ್ಲವೆಂದ ಆದಿ. 
ನಂಗೂ ಒಂದು ಬ್ರೇಕ್‌ ಬೇಕು ಎಲ್ಲಾದ್ರು ಹೋಗಿ  ಬರೊಣ್ವಾ ಕೇಳಿದ್ಲು. ಪ್ಲೇಸ್‌ ತಿರ್ಮಾನ ಮಾಡೋದರ 
ಚರ್ಚೆಗಳು ಶುರುವಾಗಿ ಕೊನೆಗೆ ಕೇರಳಕ್ಕೆ ತಲುಪಿತು. ಬಸ್‌,
ರೂಮ್‌, ಬ್ಯಾಗ್‌ ಪ್ಯಾಕ್‌ ರೆಡಿಯಾಯಿತು. ಶುಕ್ರವಾರ ಸಂಜೆ 
ಇಬ್ಬರ ಸವಾರಿ ಹೊರಟಿತು.

ಆದ್ಯಾ ಮತ್ತುಆದಿಗೆ ಇತ್ತೀಚಿಗೆ ಪರಿಚಯವಾಗಿದ್ದಾದರು ಒಬ್ಬರನೊಬ್ಬರು ಚೆನ್ನಾಗಿ ಅರಿತಿದ್ದರು. ಹಾಗೆ ಒಪ್ಪಿ ಹೋಟೆಲ್‌ ರೂಂ ಶೇರ್‌ ಮಾಡಿದ್ರು. ಬೆಳಿಗ್ಗೆ ಆದ್ಯಾಳನ್ನು ಎಬ್ಬಿಸಿ 
ಹೊರಡೊದರೊಳಗೆ ಆದಿ ಎದ್ದು ರೆಡಿಯಾಗಿ  ಇನ್ನೊಂದು ನಿದ್ದೆ ಮಾಡಿದ್ದ. ಆದಿಗೆ ಹೊರಡಲು ಹತ್ತು ನಿಮಿಷವಾದರೆ, ಆದ್ಯಾಳಿಗೆ ಗಂಟೆಯ ಮೇಲೆಹತ್ತು  ನಿಮಿಷದಲ್ಲಿ ಮುರ್ನಾಲ್ಕು ಡ್ರೆಸ್ಗಳನ್ನು ಬದಲಾಯಿಸಿ 
ರೆಡಿಯಾಗಿದ್ಲು. ಆದಿಗೆ ಒಪ್ಪವಾಗಿ ರೆಡಿಯಾದ  ಆದ್ಯಾಳನ್ನು ನೋಡಿದಾಗ ಅವಳು ತೆಗೆದುಕೊಂಡ ಸಮಯ 
ಸಾರ್ಥಕವೆಂದೆನಿಸಿತು. ಆದ್ಯಾ ವಿರಳ ಕಾಯದ  ಕೃಷ್ಣವರ್ಣಿ. ಬಟ್ಟಲು ಕಣ್ಗಳು, ಶಿವನ ಜಟಾ ಮಾದರಿಯ 
ಕೂದಲು. ಮುಖಕ್ಕೆ ಒಪ್ಪುವಷ್ಟು ಮೇಕಪ್ಪು.ಎಲ್ಲಿಯೂ ಹೆಚ್ಚಿನಿಸದ ದೇಹದ ಆಂಗಿಕ ಸೌಂದರ್ಯ. ಕನಿಷ್ಟ ಮತ್ತು ಗರಿಷ್ಠ 
ಬಟ್ಟೆಗಳಲ್ಲಿಯೂ ಸುಂದರವಾಗಿ ಕಾಣುವ ಅಪೇಕ್ಷಿತೆ. ಒಟ್ಟಾರೆ ಆದ್ಯಾಳ ಅಂದ ಆದಿಯ ಕಣ್ಣುಗಳಿಗೆ ಹಬ್ಬದೂಟ 
ಉಣಬಡಿಸುತ್ತಿದ್ದವು.

ಇಬ್ಬರೂ ರೂಮಿಂದ ಹೊರಬಿದ್ದು ದಿನವೆಲ್ಲ ಸುತ್ತ ಮುತ್ತ ಸುತ್ತಿ ಒಂದಷ್ಟು ಪೋಟೋ ಕ್ಲಿಕ್ಕಿಸಿ ಸಂಜೆ ಬಿಯರ್‌ ಹೀರಿ, ಸೀಪು಼ಡ್ಡಿನ ಬಫೆ಼ಟ್‌ ತಿಂದು ರೂಮಿಗೆ ಲ್ಯಾಂಡ್‌ ಆದರು. ಭಾನುವಾರ 
ಬೆಂಗಳೂರಿಗೆ ಹಿಂತಿರುಗಬೇಕೆಂದು ಪ್ಲಾನ್‌ ಆಗಿತ್ತು. ಆದರೆ
ಆದ್ಯಾಳಿಗೆ ಅಲ್ಲಿಯ ವಾತಾವರಣ ತುಂಬಾ ಹಿಡಿಸಿತ್ತು. ಇವರು ತಂಗಿದ್ದ ಸ್ವಲ್ಪ ದೂರದಲ್ಲಿ ಇನ್ನೋಂದು ಬೀಚ್‌ ಇದೆ ಹೋಗಣ 
ಎನ್ನುವುದು ಅವಳ ಹಠ. ಬೆಂಗಳೂರಿಗೆ  ವಾಪಸ್‌ 
ಹೊರಡೋಣ ಎಂದು ಆದಿಯ ವಾದ. ಇಬ್ಬರ ಮಾತಿನ 
ಚಕಮಕಿಯ ನಂತರ ಆದ್ಯಾ ಆದಿಗೆ ಓಪ್ಪಿಸಿದಳು. ಕೇರಳ 
ಸರ್ಕಾರದ ಲಟಾರಿ ಬಸ್ಸಿನಲ್ಲಿ ಸವಾರಿ ಇನ್ನೊಂದು ಜಾಗಕ್ಕೆ 
ಹೊರಟಿತ್ತು. ಬಸ್‌ ಲಟಾರಿಯಾಗಿದ್ದರು ವೇಗ ಮಾತ್ರ 
ವಿಮಾನದ್ದು. ತಲುಪುವ ವೇಳೆಗೆ ಬಸ್ಸು ಬಾಡಿಯ ಎಲ್ಲಾ 
ಅಂಗಗಳ ಪರಿಚಯ ಮಾಡಿಕೊಟ್ಟಿತ್ತು.

ಬಸ್‌ ಇಳಿದು ರಾತ್ರೆ 10 ರ ಹೊತ್ತಿಗೆ ಆಟೋ ಏರಿ ಇಬ್ಬರೂ 
ತಂಗುವ ನಿಲ್ದಾಣದ ಕಡೆಗೆ ಹೊರಟರು.. ಹೋಟೆಲ್‌ ಚೆಕ್‌ ಇನ್‌ಮಾಡಿ, ಬಸ್ಸಿನ ಏರಿಳಿತಕ್ಕೆ ಜಜ್ಜಿದ ದೇಹದ  ಭಾಗಗಳಿಗೆ 
ವಿಶ್ರಾಂತಿ ನೀಡಿ, ಚೆನ್ನಾಗಿ ನಿದ್ರಿಸಿ ಎದ್ದು ಮುಂಜಾನೆ ಕಡಲ 
ತಡಿಯ ಕಡೆ ಹೊರಟರು. ಆದಿ ವಿಶಾಲ ಸಮುದ್ರ, ದಡದ 
ಉದ್ದಕ್ಕೂ ಅಂಗಡಿಗಳ ಸಾಲು, ಇದು ನನ್ನ ಜಾಗವೆಂದು ಆಗಾಗಕಾಲಿಗೆ ತಾಗಿ ತಿಳಿಸುವ ಅಲೆಗಳು, ಬಲೆಗಳನ್ನು  ಹಣಿಯುತ್ತಿರುವಮೀನುಗಾರರು. ಜಾಗಿಂಗ್‌, ವಾಕಿಂಗ್‌, 
ಯೋಗದ ನಾನ ಭಂಗಿಗಳನ್ನು ಮಾಡುವುದರಲ್ಲಿ ತಲ್ಲೀನರಾಗಿದ್ದಜನರು,ಮರಳಿನ ಮೇಲೆ ಬಿಟ್ಟು ಹೋದ ಹೆಜ್ಜೆಗಳ ಗುರುತು, 
ಅಲೆಗಳ ಜೊತೆ ತೇಲಿ ಬಂದು ಒಡೋಡಿ ಹಿಂತಿರುಗುತ್ತಿರುವ 
ವಿವಿಧ ಜಲಚರಗಳು, ಅಲೆಗಳೊಂದಿಗೆ ಬಾಜಿಗಿಳಿದ ಸರ್ಪ಼ರ್ಗಳು,ಇರುಳೆಲೆಲ್ಲ ಸಮುದ್ರದಲ್ಲಿ ಮಿಂದು ಮೈ ಬೆಚ್ಚಾಗಾಗಿಸಲು 
ಆಕಾಶವೇರುತ್ತಿರುವ ಸೂರ್ಯ. ಇವೆಲ್ಲ ಗಮನಿಸಿ ಇಲ್ಲಿಗೆ 
ಬಾರದಿದ್ದರೆ ಖಂಡಿತವಾಗಿ ಮಿಸ್‌ ಮಾಡಿಕೊಳ್ಳುತಿದ್ದೆವು 
ಒಳ್ಳೆದಾಯಿತೆಂದು ಯೋಚಿಸಿ ಬನಿಯನ್‌ ಮತ್ತು ಶಾರ್ಟ್ಸ ಕಳಚಿನೀರಿಗಿಳಿದ.ಆದ್ಯಾ ದಡದ ಮೇಲೆ ಹಾರುವ ಮುಂಗುರಳನ್ನು ಮತ್ತೆ ಮತ್ತೆ ಬದಿಗೊತ್ತಿ, ಕಣ್ಗಳ ಮೇಲೆ ಕನ್ನಡಕವನ್ನು ಇರಿಸಿ , ಹಾಕಿದ್ದ ಗೌನ್‌ಥರದ ಅರಿವೆಯನ್ನು ಸಡಿಲಗೊಳಿಸಿ ಗಾಳಿಗೆ 
ಹಾರಲು ಬಿಟ್ಟು, ಸ್ಲಿಪ್ಪರನ್ನು ಕೈಯಲ್ಲಿ ಹಿಡಿದು ವಾಪಸ್ಸು ಹೋಗುವ ದಿನವನ್ನು ಇನ್ನೇರಡು ದಿನ  ಮುಂದೆ ತಳ್ಳುವ ಆಲೋಚನೆಯಲ್ಲಿ ಅಕಡೆಯಿಂದ ಈಕಡೆ, ಈಕಡೆಯಿಂದ ಆಕಡೆ 
ಓಡಾಡುತಿದ್ದಳು. ಆಫೀ಼ಸ್ನ ಮ್ಯಾನೆಜರ್ಗೆ ಪೂಸಿ ಹೊಡೆದು  ರಜೆಯನ್ನು ಮುಂದುವರೆಸಿಕೊಂಡಳು.

ನೈಟ್ ಲೈಫ್ ಕಳೆಯಲು ಹೇಳಿಮಾಡಿಸಿದ ಜಾಗ. ಬೆಳಿಗ್ಗೆ ೧೧ ಗಂಟೆಯ ಸುಮಾರಿಗೆ ಹೊಟ್ಟೆಗಿಷ್ಟು ಹಿಟ್ಟನ್ನು ಹಾಕಿ ಒಂದು 
ಸುತ್ತು ಶಾಪಿಂಗ್ ತೆರಳಿದರು. ಆದ್ಯಾ ಖುಷಿಯಿಂದ ಎಲ್ಲಾ 
ಅಂಗಡಿಗಳನ್ನು ಒಳಹೊಕ್ಕು ಹೊರಬರುತ್ತಿದ್ದಳು. ಆದಿ ಅಲ್ಲೇ ಸುತ್ತ ಮುತ್ತ ಫೋಟೋಗಳನ್ನು ತೆಗೆಯುತ್ತಾ  ಕಾಲಹರಣ 
ಮಾಡುತ್ತ, ಆದ್ಯಾ ಕೊಂಡ ಕೆಲವು ವಸ್ತುಗಳಿಗೆ ಪೇ ಕೂಡ 
ಮಾಡುತಿದ್ದ. ಮುಂದುವರೆದು ಒಂದು ಬಾಡಿ ಮಸಾಜ್ ಶಾಪ್ನ ಎದುರು ನಿಂತು ಹಿಂದಿನ ದಿನ ಬಸ್‌  ಪ್ರಯಾಣದಲ್ಲಿ 
ಜಖಂಗೊಂಡ ಮೈಯನ್ನು ಸ್ವಲ್ಪ ಹುರಿಗೊಳಿಸಲು ಮಸಾಜ್ ಪ್ಯಾಕೇಜ್ಗಳನ್ನು ಪರಿಶೀಲಿಸತೊಡಗಿದರು.  ಒಂದನ್ನು ಆಯ್ಕೆ 
ಮಾಡಿ,ಒಂಟಿಯಾಗಿ ಉರಿಯುತ್ತಿದ್ದ ದೀಪದ ರೂಮಿಗೆ ಎಣ್ಣೆಯ ಜಿಗುಟು ವಾಸನೆ ಸುಸ್ವಾಗತಿಸಿತು. ಒಳಹೊಕ್ಕು ಗುಪ್ತ 
ಕ್ಯಾಮರಾಗಳಿಗೆ ಸಾಧ್ಯತೆಯ ಬಗ್ಗೆ ಚಿತ್ತವಿಟ್ಟು, ನಿರ್ವಸ್ತ್ರಗೊಂಡು,ಮೈತುಂಬಾ ಎಣ್ಣೆ ತಿಕ್ಕಿಸಿಕೊಂಡು ಕಂಬಳದಲ್ಲಿ ಓಡುವ 
ಕೋಣಗಳಂತೆ ಕಾಣುತ್ತಿದ್ದರು. ಎಷ್ಟು ಉಜ್ಜಿದರೂ ಹೋಗದ 
ಜಿಡ್ಡನ್ನು ತಿಕ್ಕಿ ತೊಳೆದು, ಸ್ನಾನ ಮಾಡಿ ಮತ್ತೆ  ಸಮುದ್ರದಂಚಿಗೆ ಹೋಗಿ ಕುಳಿತರು. ಸೂರ್ಯ ತನ್ನ ಹಗಲಿ‍ನ 
ವೃತ್ತಿ ಮುಗಿಸಿದಣಿದು ವಿಶ್ರಾಂತಿ ತೆಗೆದುಕೊಳ್ಳಲು ಸಮುದ್ರಕ್ಕೆ 
ಇಳಿಯುತ್ತಿದ್ದ.ಆದ್ಯಾ ಸೀಗೆರೆಟ್ ಸೇದುತ್ತಾ ಹೊಗೆಯನ್ನು ರಿಂಗುರಿಂಗಾಗಿ ಬಿಡುತ್ತಾ ಪಕ್ಕದಲ್ಲಿ ಕೂತಿದ್ದಳು. ಬೆಳಿಗ್ಗೆ ತಿಂದಮೇಲೆ ಹೊಟ್ಟೆಗೆನು. ಇಳಿದಿರಲಿಲ್ಲ. ಹೊಟ್ಟೆ ಚುರುಗುಟ್ಟಲು  ಶುರುವಿಟ್ಟಿತ್ತು.ಕಡಲ ಮರಳರಾಶಿಯಿಂದ ಎದ್ದು ಬಟ್ಟೆಗಳನ್ನು ಕೊಡಕಿ ಹೋಟೆಲ್ಗೆ ತೆರಳಿ Meat Balls ಸ್ಪೆಗೆಟ್ಟಿಯನ್ನು ಅರ್ಡರ್‌ ಮಾಡಿದಳು ಆದ್ಯಾ.‌ 
ಸುಮ್ಮನಿರಲಾರದ ಆದಿ ಆದ್ಯಾಳ ಬಳಿ ಯಾವ Meat Balls ಎಂದು ಕೇಳಿದ. ಕೇರಳದ ಜಾಗ, ಹೆಚ್ಚು ವಿದೇಶಿಯರು ಸುತ್ತಾಡುವ ಜಾಗ, ವೇಟರ್‌ ಆದ್ಯಾಳಿಗೆ Beef Meat Balls ಎಂದ. ಆದಿಗೆ ಅರಿವಿಲ್ಲದೆ ಮೊದಲ ಬಾರಿಗೆ Beef 
ತಿಂದು ಅವನ ಮುಖ ಪೇಲವಾಯಿತು. ಆದ್ಯಾಳಿಗೂ ಆದಿಯ 
ಮುಖ ನೊಡಿ ಪಾಪವೆನಿಸಿತು. ನನಗೂ ಗೊತ್ತಿರಲಿಲ್ಲ ಕಣೋ, Sorry ಕೇಳಿದಳು. ಬೇಜಾರಾಗಿದ್ದಳು. ಆದಿಗೆ ಗೋವು ಹುಟ್ಟಿದ ತರುವಾಯ ಜೊತೆಗೆ ಬೆಳೆದ ಜೀವಿ, ಭಾವನಾತ್ಮಕ ಪ್ರಾಣಿ. 
ರೂಮಿಗೆ ಹೋಗಿ ತಿಂದ ಆಹಾರವನ್ನು ಪೂರ್ತೀ ವಾಂತಿ 
ಮಾಡಿದ್ದ.

ಆದಿ ದ್ವಂದ್ವ ಮನಸ್ಥಿತಿಯಲ್ಲಿ ಟ್ರಿಪ್ಗೆ ತೆರಳಿದ್ದ. ಕಾರಣ ಊರಿನಲ್ಲಿತಾಯಿಗೆ ಸ್ವಲ್ಪ ಆರೋಗ್ಯವಿರಲಿಲ್ಲ.  ಅಪ್ಪನಿಂದ ಆದಿಗೆ ಫೋನ್ ಬಂತು. ಆದಿಯ ಅಕ್ಕ ಇನ್ನೂ 
ಅಮ್ಮನನ್ನು  ನೋಡಲು ಬಂದಿಲ್ಲ,ನಾನು ಕೇಳಿದರೆ, ಅವಳು ಊರಿಗೆ ಬಂದರೆ ಅಲ್ಲಿಯ ಶೀತ ವಾತವರಣಕ್ಕೆ ಮಗುವಿಗೆ 
ಹುಷಾರಿಲ್ಲವಾಗುತ್ತದೆ ಎನ್ನುವ ಕಾರಣ ನೀಡಿದಳು ಎನ್ನುತ್ತಾ 
ಅಪ್ಪ ಕಣ್ಣೀರಿಡುತ್ತಾ ಹೇಳಿದರು. ಅಪ್ಪನಿಗೆ ಸಮಾಧಾನ 
ಪಡಿಸುವ ವೇಳೆಗೆ ಆದಿಯ ಕಣ್ಣುಗಳಲ್ಲಿಯೂ ನೀರಿಳಿಯಲು ಶುರುವಾಗಿತ್ತು.ಆದ್ಯಾಳಿನ್ನು ಸಮಾಧಾನ, ಸಂತೈಸಲು ತಿಳಿಯದ ಹುಡುಗಿ.  ಅವಳಿಗನಿಸಿದ ಉಪಾಯಗಳನ್ನು ಹೇಳಿ ಪ್ರಯತ್ನಿಸಿದಳು. 
ಆದಿಯ ಅಳು ನಿಲ್ಲಲಿಲ್ಲ. ಊರಿಗೆ ಹೋಗಲು ಇವನ ಕೆಲ್ಸ. 
ಅಕ್ಕ ಹೋಗಿಲ್ಲವೆಂದು ಅವಳ ಮೇಲಿನ ಕೋಪ. ಏನು 
ಮಾಡಬೇಕೆಂದು ತಿಳಿಯದೆ ಬಾರೊಂದಕ್ಕೆ  ಹೊಕ್ಕು ಬಿಯರ್ ಕೊಂಡ, ಇವನ ದುಃಖಕ್ಕೆ ನಕ್ಷತ್ರಗಳೆಲ್ಲ ನಗುತ್ತಿರುವಂತೆ ಕಂಡು 
ಕೆಳಗೆ ಕೂತು ಜೋರಾಗಿ ಅಳುತ್ತಾ ಬಿಯರ್ ಹೀರಿದ. ಆದ್ಯಾ 
ಪಕ್ಕದಲ್ಲಿ ಬಂದು ಸೀಗೆರೆಟ್ಹಚ್ಚಿ ಕುಳಿತಿದ್ದಳು. ಆದಿ ಮೊದಲ 
ಬಾರಿ ಅಂದು ಅವಳ ಬಳಿ ಸೀಗೆರೆಟ್ ಕೇಳಿ ಸೇದಿದ್ದ. ಸಾಕಷ್ಟು ಹರಟಿದ್ದರು.. ಅಷ್ಟರೊಳಗೆ ಆದ್ಯಾಳ ಅಲೋಚನೆ ಮುಂದಿನ  ತಿಂಗಳಲ್ಲಿ ಪ್ಲಾನ್ ಮಾಡಿದ್ದ ಟ್ರಿಪ್‌ ಬಗ್ಗೆ ಹೊರಳಿತ್ತು, ಅದರ 
ಸಾಧಕತೆ ಈಗ ಡೋಲಾಯಮಾನ. ಆದ್ಯಾ,ಆದಿಯೆಂದು 
ಕಳಕಳಿಯಿಂದ ಕರೆದು ಪ್ಲೀಸ್ ಆ ಟ್ರಿಪ್ಪನ್ನು ಮಾತ್ರ ಕ್ಯಾನ್ಸಲ್ ಮಾಡ್ಬೇಡ ಕಣೋ, I am very Excited !!! ಗೊತ್ತಾ..ಏನಾದ್ರು ಮಾಡಿ ಬಾರೋ ಅಂತ 
ಪ್ರಾಮಿಸ್ ತೆಗೆದುಕೊಂಡಳು. ಅಲ್ಲಿಗೆ ಆದಿಗೆ ಆದ್ಯಾ ಇನ್ನಷ್ಟು 
ಹತ್ತಿರವಾಗಿದ್ದಳು.

ಇಬ್ಬರೂ ಮಾತಾಡುತ್ತಾ ಅಲೆಗಳ ಸಂಗೀತಕ್ಕೆ ಕಿವಿಕೊಟ್ಟು ಕೂತಿದ್ದರು. ಆದ್ಯಾ ಇನ್ಸ್ಟಾ, ವಾಟ್ಸಾಪ್ ಚಾಟ್ ಮಾಡುತ್ತಿದ್ದರೆ, ಆದಿ ಮೊಬೈಲ್ನಲ್ಲಿ ಕವಿತೆ ಬರೆಯುತ್ತಿದ್ದ.
 
ಅಲೆಗಳು ಹೊರಟಿವೆ ಹೃದಯದ ಕಡಲಲ್ಲಿ
ಹುಡುಕುತಾ ತೀರದೀ ಕುಳಿತಿರೋ ಬಡಿತವ
ಹೇಳಲು ನೆನಪಿನ ವಿದಾಯವ ಬರುತಿವೆ ಸಾಲಲ್ಲಿ
ಹೋಗಲು ಆಗದೆ ಉಳಿಯಲು ಆಗದ ಪ್ರೀತಿಯ ಕಳಕಳಿ.....

ಅಷ್ಟರಲ್ಲೇ ಇನ್ನೊಂದು ಜೋಡಿ ತಮಿಳುನಾಡ ಕಡೆಯವರು 
ಬಂದು ಮ್ಯಾಚಸ್ ಇದ್ಯಾ ಕೇಳಿದರು. ಆದ್ಯಾಳ ಕೈಲಿದ್ದ ಲೈಟರ್ ಕೊಟ್ಟಳು. ಅಮರ್ ಮತ್ತು ಅರ್ಪಿತಾ ಪಕ್ಕದಲ್ಲಿ ಕುಳಿತರು. ಪರಿಚಯವಾಯಿತು. Both are Committed. ಅವರು ಕೈಲಿದ್ದ ವೀಡನ್ನು ಹಚ್ಚಿ ಕುಳಿತರು. ಆದ್ಯಾಳು ಸೇದಿದಳು.ಆದಿಯೂ ಕೂಡ.

ಎರಡು ಮೂರು ಪಫ್ ಸೇದುವ ಒಳಗಡೆ ಅರ್ಪಿತಾ ಮತ್ತು 
ಆದ್ಯಾ ಇಬ್ಬರನ್ನು ನಶೆ ಮಾತಾಡಿಸಲು ಪ್ರಾರಂಭಿಸಿತ್ತು.ಅರ್ಪಿತಾ ಅಲೆಗಳ ಶ್ರುತಿಗೆ ಕುಣಿಯಲು ಶುರು ಮಾಡಿದರೆ, ಆದ್ಯಾ 
ಗೆಲಿಲಿಯೋ ಥಿಯರಿಗಳನ್ನು ಮೀರುವಂತೆ ಆಕಾಶವನ್ನು 
ಬೀಚ್ನಲ್ಲಿ ಮಲಗಿ‍ ವರ್ಣಿಸಲು ಶುರುಮಾಡಿದ್ದಳು. ನಶೆಯ 
ಥಿಯರಿ ಮುಗಿಯುವ ಸೂಚನೆಗಳೆ ಕಾಣಲಿಲ್ಲ. Adya was shivering being High...ಅವಳ ಮೈಯೆಲ್ಲ ಗಡ ಗಡ ನಡುಗಲು ಶುರುವಾಗಿತ್ತು. ಆದಿಗೆ ಮನದ ಮೂಲೆಯಲ್ಲಿ ಭಯವು ಶುರುವಾಗಿತ್ತು. 
ಮೂರು ಜನರಿಗೂ ಬಿಡದಂತೆ ಒಬ್ಬಳೇ ಮಾತಾಡುತ್ತಿದ್ದಳು. 
ಆದ್ಯಾ ಸಾಕು ಅವರಿಬ್ಬರು ಕಪಲ್ಸ್ ಕಣೆ ಪ್ರೈವೆಸಿ ಕೋಡಣ 
ಎಂದು ಹಲವು ಬಾರಿ ಆದಿ ಹೇಳಿದರು ಅವಳು ಕಿವಿಗೆ 
ಹಾಕಿಕೊಳ್ಳಲಿಲ್ಲ. ನಶೆಯೆರಿದ್ದ ನಾಲಿಗೆ ಲಂಗು ಲಗಾಮಿಲ್ಲದೆ 
ಉಸುಕಿನಲ್ಲಿ ಅಲೆಯುತಿತ್ತು. ಸಾಕಷ್ಟು ಸಮಯದ ನಂತರ ಬೀಚಿನಿಂದ ಮೇಲೆದ್ದು ಹೊರಟರು. ಆದಿ ಆದ್ಯಾಳ ಕೈ ಹಿಡಿದು 
ರೂಮಿಗೆ ಕರೆದುಕೊಂಡು ಹೋದ. ರೂಮ್ ಬಳಿ 
ಹೋಗುವವರೆಗೂ ಆದ್ಯಾಳಿಗೆ ಅನುಮಾನ. ನಶೆಯಲ್ಲಿ 
ನೀನೇಲ್ಲೋ ನನ್ನನ್ನ ಬೇರೆ ಕಡೆಗೆ ಕರ್ಕೊಂಡು ಹೋಗ್ತಾ 
ಇದ್ದೀಯ, ನಂಗೇನುಮಾಡ್ಬೇಡ ಪ್ಲೀಸ್ ಎನ್ನುವ  ತೊದಲುವ 
ದನಿಯಲ್ಲಿ ಭಯವಿತ್ತು. ಫ್ರೆಶ್ ಆಗಿ ರೂಮಿನಲ್ಲಿ ಮಲಗಿದಳು. ಒಂದೇ ಬೆಡ್ ಶೇರ್ ಮಾಡುತ್ತಿದ್ದ ಆದಿ ಇಂದು ನೆಲದ ಮೇಲೆ ಮಲಗಿದ್ದ.

ಆದಿ ರೂಮಿನ ಬಾಗಿಲು ನಾಕ್‌ ಮಾಡಿದ, ಬಾಗಿಲು 
ತೆಗೆದುಕೊಂಡಿತು. ಆದ್ಯಾ ಡ್ರೆಸ್ ಚೇಂಜ್ ಮಾಡುತ್ತಿದ್ದಳ್ಳು.  ನಶೆಯಲ್ಲಿ ಆದಿ ಹೋದ ಅರಿವು ಕೂಡ ಅವಳಿಗಿರಲಿಲ್ಲ. 
ಬಾರೋ ಪರ್ವಾಗಿಲ್ಲವೆಂದಳು. ಅಲ್ಲೇ ಬಾಗಿಲ ಬಳಿಯಿಂದ ಅವಳ ಮೈಯ ನಿಲುವು, ತೊಟ್ಟ ರಾತ್ರಿಯ ತೆಳುವಾದ ಗೌನ್, ಅವಳ ನಡು, ಉಬ್ಬಿದ ಎದೆ, 
ತುರುಬು ಕಟ್ಟಿದ್ದ ಕೂದಲು ನೋಡಿ ಆದಿಗೆ 
ಬ್ರಾಂತಿಯಾದಂತಾಯಿತು. ಹೀಗೆ ಹೆಣ್ಣಿನ ಅಂದವನ್ನು ಅಷ್ಟು 
ಹತ್ತಿರದಿಂದ ಸವಿದದ್ದು ಮೊದಲಬಾರಿ. ಆದ್ಯಾ ಯಾಕೋ ಆದಿ ಏನಾಯ್ತೋ ಮಾತೇ ಆಡ್ತಿಲ್ಲ ಎಂದಳು. ಆದಿಗೆ ತನ್ನೆದುರಿಗೆ ನಿಂತ ಆದ್ಯಾಳನ್ನು ಮಾತಾಡಿಸದೆ ಅವಳನ್ನು ಬಾಚಿ ಬಿಗಿದಪ್ಪಿಕೊಂಡು ದೇಹದ ಕೋಮಲತೆಯನ್ನುಮನಸಾರೆ  ಅನುಭವಿಸಬೇಕು 
ಎನಿಸಿತು. ಅವಳ ತೊಳನ್ನು ಬಳಸಿ ತನ್ನ ಎದೆಗೆ ಅವಳ 
ಎದೆಯನ್ನು ಬಿಗಿದುಕೊಂಡು ತುಟಿಗಳ ಹಸಿವನ್ನು ಅವಳ ಕೆನ್ನೆ, ತುಟಿಗಳ ಮೇಲೆ ನೀಗಿಸಿಕೊಂಡು ಅವಳ ಮೈಮೇಲೆ  ಮೃದುವಾಗಿ ಕೈಯಾಡಿಸಿದ. ಆದ್ಯಾ ನಾಚಿಕೆಯಿಂದ  ಆದಿಯನ್ನು ತಳ್ಳಿ ದೂರ ಚಿಮ್ಮಿದಳು.
ಮತ್ತೊಮ್ಮೆ ಹತ್ತಿರ ಹೋಗಲು ಆದಿ ಪ್ರಯತ್ನಿಸಿದ. ಆದಿಗೆ 
ಅಷ್ಟರಲ್ಲಿ ಬಾಯರಿಕೆಗೆ ಎಚ್ಚರವಾಯಿತು. ಕಂಡ ಕನಸಿಗೆ 
ಅವನಿಗೆ ಅಸೂಯೆಯಾಗಿ ನೀರು ಕುಡಿಯಲು ಮುಂದಾದ. 
ಎದ್ದವನ ದೃಷ್ಟಿ ಮಂಚದ ಕಡೆಗೆ ತಿರುಗಿತು.ಆದ್ಯಾ ದಣಿದು ಮಲಗಿದ್ದಳು. ನಿದ್ರಿಸಿದ ನಿಲುವುಗಳು ಸರಿಯಿರಲಿಲ್ಲ. ಮೈಮೇಲೆ ಹೊದ್ದಿದ್ದ ಹೊದಿಕೆ ಕೆಳಬಿದ್ದಿತ್ತು.  ಸರಿಯಾಗಿ ಆದ್ಯಾಳಿಗೆ ಹೊದಿಸಿ ನೀರು ಕುಡಿದು ಮಲಗಿದ.
 
ಮರುದಿನ ಸಂಜೆ ವಾಪಸ್ ಬೆಂಗಳೂರಿಗೆ ಹೊರಡಬೇಕು 
ಅಂದುಕೊಂಡು ಮತ್ತೆ ಬೆಳಗ್ಗಿನ ತಿಂಡಿ ಮುಗಿಸಿ  ಸಮುದ್ರದ ಕಡೆ ಹೊರೆಟೆರು. ಅಮರ್ ಮತ್ತು ಅರ್ಪಿತಾ 
ದಾರಿಯಲ್ಲಿ ಸಿಕ್ಕಿದರು. ರಾತ್ರಿ ನಡೆದ ಆದ್ಯಾಳ ಥಿಯರಿ  ನೆನದು ನಕ್ಕು ಸೆಲ್ಫಿ ತೆಗೆದುಕೊಂಡು ಕೆಫೆಯಲ್ಲಿ ಕುಳಿತು 
ಮದ್ಯ ಮಿಶ್ರಿತ ಮೋಜಿಟೋ ಅರ್ಡರ್ ಮಾಡಿದರು. 
ಮೋಜಿಟೊಗಳ ಮೇಲೆ ಮೋಜಿಟೋ  ಅರ್ಡರ್ ಆಗುತ್ತಾ ಹೋದವು, ಪ್ಯಾಕುಗಟ್ಟಲೇ ಸೀಗೆರೆಟ್ ಸುಟ್ಟವು.  ನಶೆಯಲ್ಲಿ ಸಿಗೇರಿಟಿನ ತುದಿ ಬುಡ ತಿಳಿಯದ ಪರಿಸ್ಥಿತಿಗೆ ಆದ್ಯಾಮತ್ತು  ಅರ್ಪಿತಾ ತಲುಪಿದ್ದರು.  ಮದ್ಯಾಹ್ನವಾಗುವ ಹೊತ್ತಿಗೆ ಇಬ್ಬರು ನಶೆಯಲ್ಲಿ ತೇಲಿ ಒಬ್ಬರ ಬಾಯಿಂದ ಇನ್ನೊಬ್ಬರ ಬಾಯಿಗೆ ಹೊಗೆ  ಉಗುಳಲು ಶುರುವಾಗಿತ್ತು. ಆದ್ಯಾ ಮತ್ತು ಅರ್ಪಿತಾ ಕಿಸ್ಗಳ 
ಸರಣಿಯೇ ಹರಿಸಿದ್ದರು. ಹಾಕಿದ ಟಾಪ್ ಎತ್ತಿ ಬೆಲ್ಲಿ ಡ್ಯಾನ್ಸ, ಕೈ ಕೈ ಹಿಡಿದು ವಿವಿಧ ನೃತ್ಯ ಮಜಲುಗಳನ್ನು ನೀಡಿ ನಮ್ಮ ಬಾಲ್ಯದಫೆಂಟಾಸಿಗಳನ್ನು ಕಣ್ಮುಂದೆ ತಂದು ಕೆಫೆಯಲ್ಲಿ ನೆರೆದ ಇತರ 
ಜನಗಳಿಗೆ, ಕೆಫೆಯ ಟೆಂಡರ್ಸ್ಗಳಿಗೆ ಬಿಟ್ಟಿ ಮನೋರಂಜನೆಯನ್ನುನೀಡಿದರು. ಆದಿಗೆ ತಲೆಯಲ್ಲಿ ಸಲಿಂಗ ಪ್ರೇಮಿಗಳ ವಿಚಾರಗಳುಬರುತಿದ್ದವು.  ಆದಿ ಮತ್ತು ಅಮರ್ ಮೂಖ ಪ್ರೇಕ್ಷಕರು. ಸಿಕ್ಕ  ಸಮಯವನ್ನು ಬಳಸಿದ ಅಮರ್‌ ಆದ್ಯಾಳ ತುಟಿಗಳನ್ನು ಸವಿದ.ಅರ್ಪಿತಾ ಆದಿಯಿಂದ ಕಿಸ್‌ ಬಯಸಿ  ಅವನ  ಕಡೆಗೆ ತಿರುಗಿ ಕಣ್ಣಿನಲ್ಲಿ ಸನ್ನೆ ಮಾಡಿದಳು. ಆದಿ ನಿರಾಕರಿಸಿ 
ಅರ್ಪಿತಾಳ ಹಣೆಗೆ ಚುಂಬಿಸಿದ.

ಅಮರ್ ಮತ್ತು ಅರ್ಪಿತಾ ಇವರಿಬ್ಬರಿಗೂ ಇನ್ನೊಂದು ದಿನ ಉಳಿದು ಹೊರಡಿ,ಅವರು ನಾಳೆಯೇ ಹೊರಡುತ್ತೇವೆಂದು ಒತ್ತಾಯ ಮಾಡುತಿದ್ದರು. ಆದ್ಯಾಳಿಗೆ ಅಲ್ಲಿರುವ ಬಯಕೆ, ಆದರೆ ಆದಿಯ ಮನಸ್ಸು ಕದಡಿತ್ತು. ಅಲ್ಲಿಂದ ಹೊರಟರೆ ಸಾಕೆನ್ನುವ ಮನಸ್ಥಿತಿಗೆ ತಲುಪಿದ್ದ. ಆದ್ಯಾಳನ್ನು ಒಪ್ಪಿಸಿ ಟೇಬಲ್ನಿಂದ ಮೇಲೆದ್ದ. ಅಮರ್ ಆದ್ಯಾಳ ಕೈ, ಅರ್ಪಿತಾ ಆದಿಯ ಕೈ ಹಿಡಿದು ಕಿನಾರೆಯಲ್ಲಿ ನಡೆಯುತ್ತಿದ್ದರು. ಅಮರ್ ಮತ್ತು ಆದ್ಯಾ ನಡಿಗೆಯನ್ನು Enjoying Fullest. ಅರ್ಪಿತಾ ಆದಿಯ ಬಳಿ ಮುಂದಿನಬಾರಿ ಇನ್ನೊಮ್ಮೆ  ಭೇಟಿಯಾಗೋಣ, ಮೆಸೇಜ್ ಮಾಡುತ್ತಿರು,ಇಲ್ಲಿಂದಾ ಹೋದ ಕೂಡಲೇ ನೀನು ನನ್ನನ್ನಾ ಮರೆತೋಗ್ತಿಯಾ ಅಲ್ವಾ, ಹೀಗೆ ಹಲವು ವಿಚಾರಗಳನ್ನು ಹೇಳುತಿದ್ದರೆ, ಆದಿಗೆ ಅವನೊಳಗಿನ ಸಂದಿಗ್ಧತೆ ಅವನನ್ನು ಚುಚ್ಚುತಿತ್ತು. ಒಂದೆಡೆ ಮನೆಯಲ್ಲಿ ತಾಯಿ ಅನಾರೋಗ್ಯದಿಂದ ಹಾಸಿಗೆಯಲ್ಲಿ ಮಲಗಿರುವಾಗ ಇವನಿಲ್ಲಿ ಹೀಗೆ ಸುತ್ತಾಡುತ್ತಿರುವುದು ಸಮಂಜಸವೇ ? ಇನ್ನೊಂದು ಕಡೆ ಪರಿಸ್ಥಿಯ ಅರಿವಿದ್ದರೂ ಮುಂದಿನಾ ಟ್ರಿಪ್ಗೆ ಮಿಸ್ ಮಾಡದೇ ಬರಬೇಕೆಂಬಾ ಪ್ರಾಮಿಸ್ ತೆಗೆದುಕೊಂಡ ಆದ್ಯಾಳ ವರ್ತನೆ ಇವನಿಗೆ ಬೇಸರತರಿಸಿತ್ತು. ಆದ್ಯಾಳಿಗೆ ಕೊಟ್ಟ ಭರವಸೆಯನ್ನು ಉಳಿಸಿಕೊಳ್ಳಬೇಕಾ ಅಥವಾ ಹೊತ್ತೆತ್ತಾ ತಾಯಿಯ ಕಷ್ಟಗಳಿಗೆ ಹೋಗಿ ಹೆಗಲು ಕೊಡಬೇಕೆಂಬ ಇಕ್ಕಟ್ಟಿನಲ್ಲಿ ಆರ್ಪಿತಾಳಾಡಿದ ಯಾವ ಮಾತನ್ನು ಆದಿ ಕಿವಿಗೆ ಹಾಕಿಕೊಳ್ಳಲಿಲ್ಲ. ಕೆಂಪಾದ ಆಕಾಶದಲ್ಲಿ ಮುಳುಗುತ್ತಿರುವ ಸೂರ್ಯನನ್ನು
ತದೇಕ ಚಿತ್ತದಿಂದ ಆದಿ ನೋಡುತ್ತಿದ್ದ.


ಕೈಕೊಟ್ಟ ಹುಡುಗಿ

ಅಜ್ಜಿ ಶುಂಠಿ ನಿನ್ನ ಅಜ್ಜಿ ಶುಂಠಿ 
ಮಾಡೇ ಬಿಟ್ಯಲ್ಲ ನನ್ನ ಒಂಟಿ 
ನೀನು ಈಗ ಪಕ್ಕ ಆಂಟಿ 
ನಾನು ಮತ್ತೆ ಫುಲ್ ಫೋರ್ ಟ್ವೆಂಟಿ 
ಡೈಲಿ ಎಣ್ಣೆ ಅಂಗಡಿ ನನ್ನ ಡ್ಯೂಟಿ 
ಫುಲ್ ಬಾಟ್ಲಿ ಎಂಟಿ  ಎಂಟಿ

ಹೇಗೋ ಇದ್ದೆ ನಾನು ರಿಕ್ಷಾ ಓಡ್ಸಕೊಂಡು
ಸೈಕಲ್ ತುಳಿಯಕ್ಕೆ ಶುರುಮಾಡಿದೆ ನಿನ್ನ ನೊಡ್ಕೊಂಡು
ಇರೋ ಕೆಲ್ಸ  ಬಿಟ್ಟು ನಿನ್ನ ಹಿಂದೆ ಸುತ್ಕೊಂಡು 
ಹೋಗೆ ಬಿಟ್ಯಲ್ಲೇ ನೀನು ಮುಖ ತಿರ್ಸ್ಕೊಂಡು
ಇಂಥ ಪ್ರಾಬ್ಲಮ್ ಲವ್ವಲ್ಲಿಆರ್ಡಿನರಿ 
ಯಾವದಕ್ಕೂ ಗುರ್ತಿಗೆ ಗಡ್ಡ ಬಿಡ್ಕೊಂಡಿರಿ
ಶೇವಿಂಗ್ ನಾಟ್ ಕಂಪಲ್ಸರಿ

ಕೇಳಿದಷ್ಟೇ ಹಾರ್ಟಲ್ಲಿ ಸಿಂಗಲ್ ಸೀಟ್ 
ಆದ್ರೆ ನಾನಾದೆ ಅವಳಪಾಲಿಗೆ ಹಳೆ 
ಐನೂರು ಸಾವಿರದ ಖಾಲಿ ನೋಟು 
ಹುಡಿಗಿರುಗು ನೋಟಿಗೂ ಎಂಥ ಸಿಮಿಲಾರಿಟಿ 
ಹೊಸದು ಸಿಗೋದಿಲ್ಲ ಹಳೇದು ನಡೆಯಲ್ಲ 
ಪ್ರೀತಿ ಅಂದ್ರೆ ನಿಜವಾಗ್ಲು ಹಿಂದೆ ಸುತ್ತೋದಾ
ಇಲ್ಲ ಸುತ್ತಿದೆಲ್ಲ ಮರ್ತು ಸ್ಟೆಪ್ಪು ಹಾಕೋದ 

ನಿನ್ನ ಕಣ್ಣ ಸೆಲೆ

ಸೆರೆಯಾದೆ ಯಾಕೋ ನಿನ್ನ ಕಣ್ಣ ಸೆಲೆಗೆ 
ಶುರುವಾಯ್ತು ಈಗ ಈ ತುಂಟ ಸಲಿಗೆ 
ಸಾಕಾಯ್ತು ಇನ್ನು ಈ ಮನದ ಸುಲಿಗೆ 
ಸೇರೆಯಾಯ್ತು ಹೃದಯ ನಿನ್ನ ಪ್ರೀತಿ ಸುಳಿಗೆ 

ಮೋಡಿಯೇ ಮಾಡಿದೆ ನಿನ್ನಯ ಪರಿಚಯ 
ದಿನಚರಿ ಇಲ್ಲದೆ ಕಳೆದೆನು ಪ್ರತಿದಿನ 
ಆಸೆಗಳು ನೂರು ಕನಸುಗಳು ನೂರಾರು 
ಒಲವೊಂದೆ ಸಾಕು ನನ್ನ ಪ್ರೀತಿ ಆಸ್ತಿಗೆ 
ನೀನೆ ತಾನೇ ಬೇಕು ಈ ಪ್ರೀತಿ ವ್ಯಾಪ್ತಿಗೆ 

ಸೆರೆಯಾದೆ ಯಾಕೋ ನಿನ್ನ ಕಣ್ಣ ಸೆಲೆಗೆ 
ಸರೆಯಾಯ್ತು ಮನಸ್ಸು ಈ ಸುಂದರ ಅಲೆಗೆ 

ಕನಸಲೂ ಮನಸಲೂ ನಿನ್ನದೇ ಅತಿಶಯ 
ಹಗಲಲು ಇರುಳಲು ಪ್ರೀತಿಲೆ ಪರವಶ 
ಮನಸಲಿ ಕನಸಾಗಿ ಜೊತೆಯಲಿ ನೆರಳಾಗಿ 
ಕಾದಿರುವೆ ನಾ ನಿನಗಾಗಿ ನಿನ್ನ ಜೊತೆಗಾಗಿ 
ತೆರೆಯಾಗಿ ಅಲೆಯಾಗಿ ಪುಟ್ಟ ದಡವಾಗಿ

ದಾರಿ ತಪ್ಪಿದ ದಾಸಿ

ಸ್ವಭಾವತಃ ಬಲುಪಾಪ. ಹಣೆಯೊಲ್ಲೊಂದು ಬಿಳಿನಾಮ.ಆದ್ರಿಂದ ಅವ್ಳಿಗೆ ದಾಸಿ ಎಂಬಾ ನಾಮಕರಣವಾಯಿತು. ಉಳಿದ ಕಡೆಯಲ್ಲ ಬರೆ ಶ್ಯಾಮಲ. ನೋಡಲೂ ದಷ್ಟಪುಷ್ಟವಾಗಿದ್ದು ಊರಿನಲ್ಲಿ ಯಾ...