ದಾರಿ ತಪ್ಪಿದ ದಾಸಿ
ಸ್ವಭಾವತಃ ಬಲುಪಾಪ. ಹಣೆಯೊಲ್ಲೊಂದು ಬಿಳಿನಾಮ.ಆದ್ರಿಂದ ಅವ್ಳಿಗೆ ದಾಸಿ ಎಂಬಾ ನಾಮಕರಣವಾಯಿತು. ಉಳಿದ ಕಡೆಯಲ್ಲ ಬರೆ ಶ್ಯಾಮಲ. ನೋಡಲೂ ದಷ್ಟಪುಷ್ಟವಾಗಿದ್ದು ಊರಿನಲ್ಲಿ ಯಾರೆ ನೋಡಿದರು ಭಟ್ಟರ ಮನೆಯ ಹಸುವೆಂದು ನೋಡಿದ ಕೂಡಲೇ ಹೇಳಬಹುದಾದ ಚಲಪತಿ ಭಟ್ಟರ ಮತ್ತು ಮಾಲತಿ ದಂಪತಿಗಳ ಸಾಕಾಣಿಕೆ. ಮನೆಯಲ್ಲೇ ಹುಟ್ಟಿ ಬೆಳೆದು ದೊಡ್ಡದಾದ ಬುಡ. ಕೊಡಿಲ್ಲ ಬೋಳಿ. ರಸ್ತೆ ಬದಿಯಲ್ಲಿ, ಕಾಡಿನಲ್ಲಿ, ಗದ್ದೆ,ಕೆರೆಗಳ ಬದಿ ಯಾರೇ ಕರೆದರೂ ನಿಂತು ಮೈ ತುರಿಸಿಕೊಂಡು ಹೋಗುವಷ್ಟು ಸಾಧು. ಪ್ರತಿ ಷಷ್ಠಿಯ ದಿನ ಊರ ಆಶ್ವತ್ಥ ಮರದ ಬಳಿಯಲ್ಲಿರುವ ನಾಗರ ಕಲ್ಲಿನ ಪೂಜೆಯ ನೈವಿಧ್ಯದ ಬಾಳೆಹಣ್ಣು, ನೆನಸಿದ ಅಕ್ಕಿ, ಬೇಳೆ ತಿನ್ನಲ್ಲೂ ತಪ್ಪದ ಹಾಜರಿ. ಒಂದು ವೇಳೆ ಪ್ರಸಾದ ಕೊಡಲಿಲ್ಲವೆಂದಲ್ಲಿ ನಾಗರ ಕಟ್ಟೆಗೆ ಎರಡು ಕಾಲು ಕೊಟ್ಟು ನಿಂತು, ನನ್ನ ಪಾಲಿನ ಪ್ರಸಾದ ಎಂದು ಪುರೋಹಿತರಿಗೆ ವರಾತಬಿದ್ದು ಗಿಟ್ಟಿಸಿಕೊಳ್ಳುವ ಸಲಿಗೆ. ಮಲೆನಾಡು ಗಿಡ್ಡ, ಕೊಟ್ಟಿಗೆಗೆಲ್ಲ ಮುದ್ದು. ದಿನಕ್ಕೆ ಒಂದು ಕಟ್ಟಾಗುವಷ್ಟಾದರು ಹಸಿಹುಲ್ಲು ಬಾಯಿಬುಡದ ವಡ್ಡಿಗೆ (ತಿಂಡಿ ಮತ್ತು ಹುಲ್ಲನ್ನು ಹಾಕುವ ಕೊಟ್ಟಿಗೆಯ ಎದುರಿನ ಜಾಗ) ಬೀಳಬೇಕು ಇಲ್ಲವೆಂದರೆ ಇಡಿದಿನ ನಿರಹಾರ. ಭಟ್ಟರು ಬೇಕಾದರೆ ಒಂದೊತ್ತು ಊಟ ಬಿಟ್ಟಾರು, ಆದರೆ ದನಗಳನ್ನು ಉಪವಾಸ ಕಟ್ಟಿದ್ದಿಲ್ಲ. ಪೇಟೆ ಮನೆಗಳಲ್ಲಿ ನಾಯಿ ಅಥವಾ ಬೆಕ್ಕು ಸಾಕಿದ್ಹಾಗೆ, ಭಟ್ಟರಿಗೆ ಜಾನುವಾರೆಂದರೆ ಬಹಳ ಮಮತೆ. ಬೇಕಾದ ಹಾಗೆ ಹೊಟ್ಟೆಗೆ ಹಾಕಲು ಚಲಪತಿ ಭಟ್ಟರು ಜಮಿನ್ದಾರಾರೆನಲ್ಲ. ಚಂಪಾಪತಿ ಭಟ್ಟರ ಅವಿಭಕ್ತ ಕುಟುಂಬ ಪಾಲದಾಗ ಸಿಕ್ಕ ಅರ್ದ ಎಕರೆ ಅಡಕೆ, ಕಾಪಿ, ಕಾಳುಮೆಣಸು ಬೆಳೆಯುವ ರಿಕಾರ್ಡಿನ ಹಿಡುವಳಿ. ಇನ್ನರ್ದ ಎಕರೆ ಒತ್ತುವರಿ ಜಾಗ. ಅದರಲ್ಲಿ ಪ್ರಮುಖ ಬೆಳೆಯಾದ ಅಡಿಕೆಗೆ ಹಳದಿಯಲೆ, ತುಂಡೆ ರೋಗ. ಮುರ್ನಾಲ್ಕು ಕ್ವಿಂಟಾಲ್ನಷ್ಟು ಆಗುತ್ತಿದ್ದ ಫಸಲು ಈಗ ಒಂದು ಕ್ವಿಂಟಾಲ್ನವೊಳಗೆ ಬಂದು ನಿಂತಿದೆ.
ಚಲಪತಿ ಭಟ್ಟರ ಮನೆಯಲ್ಲಿ ಜಾನುವಾರುಗಳನ್ನು ಕಟ್ಟಿಸಾಕಿ ಅಭ್ಯಾಸವಿಲ್ಲ. ಬೆಳ್ಳಿಗೆ ಗೊಬರ್ ಗ್ಯಾಸ್ಗೆ ಸಗಣಿ ಹೆಕ್ಕಿ ,ಕಲಸಿ, ಹಿಂಡಿಯಿಟ್ಟು ಹಾಲು ಕರೆಸಿದ ಕೂಡಲೇ ಕಣ್ಣಿ(ಸರಪಣಿ) ಕಳಚಿ ಹೊರಗೆ ಬಿಟ್ಟರೆ ಮತ್ತೆ ಅವನ್ನು ಮೇಯಿಸಲು ಯಾರಬ್ಬೊರ ಕಾಳಜಿಯ ಮೇಲ್ವಿಚಾರಣೆಯ ಅಗತ್ಯವಿಲ್ಲ. ದಾಸಿ ಭಾನು, ಭಾವನಿ, ಕೆಂಪಿ ನಾಲ್ಕು ಒಟ್ಟಾಗಿ ಮೆಂದು, ತಿರುಗಾಡಿ ಸಂಜೆಯ ಸಮಯಕ್ಕೆ ಹಿಂದಿರುಗುವುದು ರೂಢಿ. ಸಂಜೆ ಕೊಟ್ಟಿಗೆ ಬಂದೊಡನೆ ಹೊಟ್ಟೆಗೆ ಹಾಕಿ ಹಾಲು ಕರೆಸುವುದು, ಇದಿಷ್ಟು ಇವುಗಳ ದಿನಚರಿ. ಆದರೆ ದಾಸಿ ಇದಕ್ಕೆ ಅಪವಾದ.
ದಾಸಿಗೆ ಪ್ರತಿದಿನವೂ ಮನೆಗೆ ಬರುವುದಕ್ಕೆ ಆಲಸ್ಯ, ಒಂದು ವೇಳೆ ಸಂಜೆ ಬರದಿದ್ದಲ್ಲಿ ಗುಡ್ಡದ ಮೇಲೆ ಉಡಿಯಲ್ಲೋ ಅಥವಾ ನೆರೆಮನೆಯವರ ಗೊಬ್ಬರಗುಂಡಿಯಲ್ಲಿ ಇರುಳು ಕಳೆಯುತ್ತಿತ್ತು. ನಾಳೆ ಮತ್ತೆ ಶಾಲೆಗೆ ಹೋಗಬೇಕಲ್ಲವೆಂಬ ಬಾಲವಾಡಿ ಮಕ್ಕಳ ತರ್ಕ. ಹಲವು ಬಾರಿ ಎರಡು ಮೂರು ದಿನಗಳಿಗೊಮ್ಮೆ ಮನೆಗೆ ಬಂದ ಪ್ರಸಂಗಗಳಿವೆ. ದಾಸಿ ಬರಲಿಲ್ಲವೆಂದು ಭಟ್ಟರು ಜಾಸ್ತಿ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಪ್ರಾಯದಲಿನ್ನು ಮಣ್ಕ (ಒಂದರಿಂದ ಎರಡುವರೆ ವರ್ಷದೊಳಗಿನ ಕರು) ಇಂದಲ್ಲವೇ ನಾಳೆ ಬರುತ್ತದೆ ಎನ್ನುವ ವಿಶ್ವಾಸ. ಆದರೆ ಇತ್ತೀಚಿಗೆ ಮೈತುಂಬಿರುವ ರಾಸುಗಳನ್ನು ಪುಂಡ ತುರ್ಕರ ಪಡೆ ಅಪಹರಿಸಿದ ನಿದರ್ಶನಗಳನ್ನು ಚಲಪತಿ ಭಟ್ಟರು ದಿನಪತ್ರಿಕೆಯಲ್ಲೂ ಓದಿ ಮತ್ತು ಊರವರ ನಾಲಿಗೆಗಳಿಂದ ಕೇಳಿ ಗೊತ್ತು. ಕೆಲ ದುರುಳರಿಗೆ ಕಣ್ಗತ್ತಲೆ ಕಟ್ಟಿದ ಕೂಡಲೇ ನಿರ್ಜನ ಪ್ರದೇಶದಲ್ಲಿದ ದನಕರುಗಳ ಅಪಹರಣ ಮಾಡುವುದೇ ಉದ್ಯೋಗ. ಇದೊಂದು ಅಳುಕು ಭಟ್ಟರಿಗೆ ಆಗಾಗ ಕಾಡುತಿತ್ತು.
ದಾಸಿಯೀಗ ಒಂಭತ್ತು ತಿಂಗಳ ಗಬ್ಬ(ಗರ್ಭಿಣಿ). ಗುಡ್ದದ ಮೇಲೋ ಅಥವಾ ರಸ್ತೆಬದಿಯಲ್ಲಿ ಕರುಹಾಕಿ, ದುಷ್ಕರ್ಮಿಗಳು ತುಂಬಿಕೊಂಡು ಹೋದರೆ, ಒಂದೆಡೆ ಹದಿನೈದರಿಂದ ಇಪ್ಪತ್ತು ಸಾವಿರದ ಸ್ವತ್ತು ಹೋಯಿತು ಹಾಗೆ ಮನಸ್ಸಿನ ನೆಮ್ಮದಿ ಕೂಡ. ಹಾಗಾಗೆ ಭಟ್ಟರಿಗೆ ಮುಂಚಿನಂತೆ ಆಕಳು ಮನೆಗೆ ಬರದಿದ್ದರೆ ಕಾಯಲು ಅಂಜಿಕೆ. ಇಂತಹ ಸನ್ನಿವೇಶದಲ್ಲಿ, ದಿನ ಬೆಳಿಗ್ಗೆ ಮೇಯಲು ಮಾಲತಿಯನ್ನೂ ಕೇಳಿ, ಪೃಷ್ಠ ಭಾಗವನೊಮ್ಮೆ ಪರೀಕ್ಷಿಸಿ ಬಿಡುತ್ತಿದ್ದರು. ಹೀಗಿರುವಾಗ ಅಂದು ಬಿಟ್ಟ ದಾಸಿ ಹಿಂದುರುಗಲಿಲ್ಲ. ಅದರ ಸ್ವಭಾವ ತಿಳಿದಿದ್ದರಿಂದ ಆ ದಿನ ನಾಳೆ ಬರಬಹುದೆಂಬ ನಂಬಿಕೆಯ ಮೇಲೆ ಸುಮ್ಮನಿದ್ದರು. ಆ ರಾತ್ರಿ ಚಲಪತಿ ಭಟ್ಟರಿಗೆ ನಿದ್ರೆ ಕೂಡ ಕಣ್ಣಿಗೆ ಹತ್ತಲಿಲ್ಲ. ಯಾವುದೋ ದಟ್ಟಡಿವಿಯಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿ ಬಿಟ್ಟಂತೆ. ದಾಸಿಯದೆ ಕುರಿತು ಯೋಚನೆ. ಮರುದಿನ ಬೆಳಕರಿಯುತ್ತಿದ್ದಂತೆ ಭಟ್ಟರು ಕೊಟ್ಟಿಗೆ ಕೆಲಸವನ್ನು ಮಾಲತಿಯಲ್ಲಿ ಮಾಡಲು ತಿಳಿಸಿ, ದಾಸಿಯನ್ನು ಹುಡುಕಲು ಕಾಲಿಗೆ ಚಕ್ರ ಕಟ್ಟಿದವರ ವೇಗದಲ್ಲಿ ಮನೆಯಿಂದ ಹೊರಟರು. ರಸ್ತೆಬದಿ, ಕೆರೆಬದಿ, ಪಕ್ಕದ ಸುಂಕಪ್ಪ ಗೌಡರ ಮನೆಯ ಗೊಬ್ಬರಗುಂಡಿ ಹೀಗೆ ದಾಸಿ ದಿನ ಹೋಗುತ್ತಿದ ಜಾಗಗಳನ್ನು ಹುಡುಕಿದರು. ಎಲ್ಲೂ ಕಾಣಿಸಲಿಲ್ಲ. ಬೆಳಿಗ್ಗೆ ಗಂಜಿ ಊಟದ ಸಮಯಕ್ಕೆ ಹಿಂದಿರುಗಿದರು. ಪುನಹ ಸಂಜೆ ಹುಡುಕಲು ಹೊರಟರು. ದಾಸಿಯ ಸುಳಿವಿಲ್ಲ.
ಬೆಳಿಗ್ಗೆ ಸಂಜೆ ಬೆಳಿಗ್ಗೆ ಸಂಜೆ ಹೀಗೆ ಭಟ್ಟರು ಹುಡುಕುವುದನ್ನೂ ಬಿಟ್ಟಿರಲಿಲ್ಲ. ನೆರೆಮನೆಗಳಿಗೆ ಫೋನು ಹಾಯಿಸಿ, ಹೋಗಿ ಕೇಳಿದ್ದಾಯಿತು ಆದರೂ ದಾಸಿಯ ಸುಳಿವಿಲ್ಲ. ಇಲ್ಲಿಗೆ ದಾಸಿ ಕಾಣೆಯಾಗಿ ನಾಲ್ಕನೇ ದಿನ. ಕರುವಾಕಿದ ಹಸುವನ್ನು ಯಾರೋ ದುಷ್ಕರ್ಮಿಗಳು ಹೊತೊಯ್ದರೆಂದೆಲ್ಲ ಯೋಚಿಸಿ, ಮುಂಡೆ ಮಕ್ಕಳ ವಂಶಕೆಲ್ಲ ಹಿಡಿಶಾಪ ಹಾಕಿದರು. ಮತ್ತೆ ಛಲ ಬಿಡದ ಭಟ್ಟರು ನಾಲ್ಕನೇ ದಿನ ಸಂಜೆ ಹುಡುಕಲು ಹೊರಟರು. ಮನೆ ಮೇಲಿನ ಗುಡ್ಡದ ದೂಪದ ಮರದ ಕೆಳಗಿನ ಚಿಕ್ಕ ಉಡಿಯ ಬಳಿ ಹುಂಕಾರ ಕೇಳಿದ ಹಾಗಾಯಿತು. ನಾಲ್ಕು ದಿನ ಮುಖ ಸಪ್ಪೆಹಾಕಿಕೊಂಡ ಭಟ್ಟರ ಮುಖದಲ್ಲಿ ನಗು ಹರಿದಿತ್ತು. ಕಗ್ಗತ್ತಲೆಯ ದಾರಿಯಲ್ಲಿ ಮಿಣುಕು ಹುಳ ಸಿಕ್ಕಹಾಗೆ. ದಾಸಿ ಅಲ್ಲಿದ್ದಳು. ಭಟ್ಟರನ್ನು ನೋಡಿದ ಕೂಡಲೇ ಓಡಿಯು ಬಂದಳು. ಕುತ್ತಿಗೆಗೊಂದು ಹಗ್ಗ ಹಾಕಿ ಮನೆಗೆ ಹೊಡ್ಕೊಂಡು ಬಂದರು, ಮಾಲತಿಯಮ್ಮ ಕೂಡ ಕೊಟ್ಟಿಗೆ ಓಣಿಯ ಬದಿ ನಿಂತು ಕಾಯುತ್ತಿದ್ದರು. ಒಮ್ಮೆ ಮೈಸವರಿ, ಹಸಿಹುಲ್ಲನ್ನು ಹಾಕಿ ಕಟ್ಟಿದರು. ಭಟ್ಟರು ಉಸ್ಸಪ್ಪಾ ಸಾಕಾಯ್ತು ಎಂಬಂತೆ ಉಸಿರು ಬಿಟ್ಟು ವೊಡ್ಡಿಯ ಮೇಲೆ ಕುಳಿತರು. ಬೆಟ್ಟದ ಭಾರ ತಲೆಮೇಲಿನಿಂದ ಇಳಿಸಿದಷ್ಟು ಸಮಾಧಾನವಾಯಿತು.
ಅದೇ ಸಮಯಕ್ಕೆ ಸರಿಯಾಗಿ ಭಟ್ಟರ ತಮ್ಮೆನ್ದರಾದ ಗಜಪತಿ, ಲಕ್ಷ್ಮೀಪತಿ, ವೆಂಕಟೇಶ ಮತ್ತುಅವರ ಸಂಸಾರ ,ದಾಸಿಯನ್ನು ನೋಡಲು ಕೆಳಗಿನ ಮನೆಗೆ ಬಂದರು.
ಚಂಪಾಪತಿ ಭಟ್ಟರದ್ದು ಕೂಡು ಕುಟುಂಬ. ಬರೋಬ್ಬರಿ 17 ಜನರಿದ್ದ ಮನೆ. ಆದರೆ ಕೆಲವು ವರ್ಷಗಳ ಹಿಂದೆ ವೈಮನಸ್ಸುಗಳಿಂದ ಬೇರೆ ಬೇರೆಯಾಗಿ ಗಜಪತಿ, ಲಕ್ಷ್ಮೀಪತಿ, ಚಲಪತಿ ಮತ್ತು ವೆಂಕಟೇಶನಿಗೆ ಇರುವ ಕೃಷಿ ಭೂಮಿ ಮತ್ತು ಸೊಪ್ಪಿನ ಹಾಡ್ಯವನ್ನು ಸಮಪಾಲು ಮಾಡಿದ್ದರು. ಚಲಪತಿ ಭಟ್ಟರ ಮನೆಯ ಮೇಲ್ಭಾಗದ ದರ್ಕಸ್ತಿನಲ್ಲಿ ಗಜಪತಿ, ಲಕ್ಷ್ಮೀಪತಿ ಮನೆಕಟ್ಟಿ ವಾಸಿಸುತ್ತಿದ್ದರು. ಕೊಟ್ಟಿಗೆಗೆ ಬಂದ ಗಜಪತಿ, ದನ ಕರುಹಾಕಿದ ಹಾಗೆ ಕಾಣ್ತಿದೆ ಎನ್ನುವ ಸಂಶಯ ವ್ಯಕ್ತ ಪಡಿಸಿದ. ಆಗಾ ತಾನೆ ಉಸಿರುಬಿಟ್ಟು ಕುಳಿತಿದ್ದ ಚಲಪತಿ ಭಟ್ಟರಿಗೆ ಮತ್ತೋಮ್ಮೆ ಗೊಂದಲವಾಯಿತು. ಗುಡ್ಡದಮೇಲೆ ಸಿಕ್ಕಿದು ದಾಸಿ ಮಾತ್ರವೇ ಹೊರತು ಸುತ್ತಮುತ್ತ ಕರುವೆಲ್ಲೂ ಇರಲಿಲ್ಲ. ಹೀಗೆ ಒಬ್ಬಬರದ್ದು ಒಂದೊಂದು ಅಭಿಪ್ರಾಯ. ಒಬ್ಬರು ಕರುವಾಕಿದೆ ಅಂದರೆ ಇನ್ನೊಬ್ಬರದು ಗ್ಯಾರೆಂಟಿ ಇಲ್ಲ. ಒಂದು ವೇಳೆ ಕರು ಹಾಕಿದ್ದಲ್ಲಿ ತಾಯಿ ಕರುವನ್ನು ಬಿಟ್ಟುಬರಲು ಸಾಧ್ಯವಿಲ್ಲ ಎಂಬ ವಾದವನ್ನು ಕೆಲವರು ಮಂಡಿಸಿದರು. ಆದರೆ ವೆಂಕಟೇಶ ದಾಸಿ ಚೊಚ್ಚಲ ಮಣ್ಕ (ಮೊದಲ ಕರು) ಕರುವನ್ನು ಬಿಟ್ಟುಬಂದಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲವೆಂದ. ನಡೆದ ಗೋಜಲುಗಳನ್ನೆಲ್ಲ ಗಮನಿಸಿ ಚಲಪತಿ ಭಟ್ಟರು ಒಂದು ನಿರ್ಧಾರಕ್ಕೆ ಬಂದಂತೆ ಡಾಕ್ಟರನ್ನು ಕರೆಸಿ ಕೇಳೋದೇ ಉತ್ತಮವೆಂದು ನಿರ್ಧರಿಸಿದರು. ಫೋನು ಮಾಡಿ ಕರೆದಾಯಿತು, ಡಾಕ್ಟರು ಬಂದರು, ಪರೀಕ್ಷಿಸಿದರು. ಕರುವಿನ್ನು ಗರ್ಭದಲ್ಲಿದೆಯಂದು ಧೈರ್ಯ ತುಂಬಿ ಜೇಬಿಗೆ ಇನ್ನೂರು ರೂ ಇಳಿಸಿ ಹೋದರು.
ರಾತ್ರಿ ಮಲಗುವಾಗ ಮಾಲತಿ ಮತ್ತು ಚಲಪತಿ ಭಟ್ಟರು ಇನ್ನು ಕರುಹಾಕುವವರೆಗೆ ದನವನ್ನು ಮೇಯಲು ಬಿಡುವುದಿಲ್ಲವೆಂದು ನಿರ್ಧರಿಸಿ ಕಣ್ಮುಚ್ಚಿದರು. ಅಂದು ಭಟ್ಟರಿಗೆ ಸಸೂತ್ರವಾಗಿ ಕಣ್ಣಿಗೆ ನಿದ್ದೆ ಹತ್ತಿತ್ತು. ತಾಯಿಯ ಎದೆ ಹಾಲು ಕುಡಿದು ಮಲಗಿದ ಮಗುವಿನ್ಹಾಗೆ. ಹೀಗೆ ಮೂರ್ನಾಲ್ಕು ದಿನ ದಾಸಿಯನ್ನು ಕೊಟ್ಟಿಗೆಯಿಂದ ಹೊರ ಬಿಡಲಿಲ್ಲ. ಆದರೆ ದನ ಕರುವಾಕುವ ಯಾವುದೇ ಸೂಚನೆಗಳನ್ನು ತೋರಲಿಲ್ಲ.
ಹೀಗಿರುವಾಗ ದಾಸಿ ಸಿಕ್ಕಿ ಎರಡನೇ ದಿನ ಊರಿನ ಮಲ್ಲಪ್ಪ ಗೌಡರಿಂದ ದೂರವಾಣಿ ಕರೆಬಂದಿತು. ಭಟ್ಟರೆ ʼನಮ್ ಮನಿ ಗೊಬ್ರು ಗುಂಡಿಲ್ಲಿ ಒಂದ್ ಕರ್ಳು ಬಳ್ಳಿ ಒಣಗಿರೋ ಕರುವದೇ, ಬಂದ್ ನಿಮ್ದೇನಾ ನೋಡಿʼ ಎಂದು ಹೇಳಿ ಫೋನಿಟ್ಟರು. ಚಲಪತಿ ಮತ್ತೆ ಗಜಪತಿ ಕರೆ ಕಟ್ ಮಾಡಿದ ವೇಗದಲ್ಲೆ ಹೊರಟರು. ಕರುವನ್ನು ನೋಡಿ ಕರುವಿನ ಕರುಳಬಳ್ಳಿ ಆಗತಾನೇ ಒಣಗಿದಿದ್ದಿದ್ದು ನಿಜ. ಇಬ್ಬರು ನಿರ್ಧರಿಸಿದಂತೆ ಕರುವನ್ನು ಹೊತ್ತು ಮನೆಗೆ ನಡೆದರು. ಹೋಗಿ ಕೊಟ್ಟಿಗೆಯಲ್ಲಿ ಬಿಟ್ಟ ಕೂಡಲೇ ಕರು ಕುಪ್ಪಳಿಸಿ ನೆಗೆದು ತಾಯಿ ದಾಸಿಯ ಹತ್ತಿರ ಹೋಯಿತು. ಜಾತ್ರೆಯಲ್ಲಿ ಕಳೆದೋದ ಮಕ್ಕಳಿಗೆ ಅಮ್ಮ ಸಿಕ್ಕಿದ ಹಾಗೆ. ದಾಸಿಯು ಕೂಡ ಕರುವನ್ನು ಮುದ್ದಿನಿಂದ ನೆಕ್ಕಲು ಶುರುಮಾಡಿದಳು. ಮಗು ಸಿಕ್ಕ ಖುಷಿಗೆ ಮುದ್ದಾಡಿದ ತಾಯಿಯಂತೆ. ದಾಸಿ ಕರುವಿಗೆ ಹಾಲು ಕುಡಿಸಿದಳು. ಹೀಗೆ ಮೂರ್ನಾಲ್ಕು ದಿನ ಬೇರ್ಪಟ್ಟ ತಾಯಿ ಮಗಳು ಒಂದಾಗಿದ್ದವು. ಚಲಪತಿ ಭಟ್ಟರ ಮುಖದಲ್ಲಿ ನೆರದಿದ್ದ ಚಿಂತೆಯ ಗೆರೆಗಳು ಸರಿದು ಮಂದಹಾಸವು ಮೂಡಿತ್ತು. ವಸಂತಕಾಲದಲ್ಲಿ ಕಟ್ಟಿದ ಮೋಡ ಕರಗಿ ನೇಸರನ ಕಿರಣಗಳು ಮೂಡಿದಂತೆ.
Subscribe to:
Posts (Atom)
ದಾರಿ ತಪ್ಪಿದ ದಾಸಿ
ಸ್ವಭಾವತಃ ಬಲುಪಾಪ. ಹಣೆಯೊಲ್ಲೊಂದು ಬಿಳಿನಾಮ.ಆದ್ರಿಂದ ಅವ್ಳಿಗೆ ದಾಸಿ ಎಂಬಾ ನಾಮಕರಣವಾಯಿತು. ಉಳಿದ ಕಡೆಯಲ್ಲ ಬರೆ ಶ್ಯಾಮಲ. ನೋಡಲೂ ದಷ್ಟಪುಷ್ಟವಾಗಿದ್ದು ಊರಿನಲ್ಲಿ ಯಾ...

-
ಸ್ವಭಾವತಃ ಬಲುಪಾಪ. ಹಣೆಯೊಲ್ಲೊಂದು ಬಿಳಿನಾಮ.ಆದ್ರಿಂದ ಅವ್ಳಿಗೆ ದಾಸಿ ಎಂಬಾ ನಾಮಕರಣವಾಯಿತು. ಉಳಿದ ಕಡೆಯಲ್ಲ ಬರೆ ಶ್ಯಾಮಲ. ನೋಡಲೂ ದಷ್ಟಪುಷ್ಟವಾಗಿದ್ದು ಊರಿನಲ್ಲಿ ಯಾ...
-
The Stranger Kisses ಮಿಣಿ ಮಿಣಿ ಹೊಳೆಯುವ ಸಮುದ್ರ, ದೂರದೊಲ್ಲೊಂದು ಹಾಯುತ್ತಿರುವ ಹಡಗು. ದೋಣಿಗಳಲ್ಲಿ ಮೀನಿಗೆ ಬಲೆ ಬೀಸುತ್ತಿರುವ ಮೊಗವೀರರು. ಆಕಾಶದಲ್ಲಿ ಪ್ಯ...
-
ದೇಶಸೇವಾಗ್ರರು ಸಂಘದಕ್ಷ, ಸಾವಧಾನ್, ವಿಶ್ರಾಮ್ ಈ ಶಬ್ದಗಳನ್ನು ಕೇಳಿದೊಡನೆ ಗಮನ ಎಲ್ಲೇ ಇದ್ದರೂ ಕಿವಿ ನಿಮಿರೇಳುತ್ತದೆ. ಸೇವಾನಿರತೆ , ಶಿಸ್ತು,ಬದ್ಧತೆ, ಕಷ್ಟ ಸಹಿಷ್ಣು...